
ನವದೆಹಲಿ: ಜಿಎಸ್‌ಟಿ ದರ ಇಳಿಕೆಯು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಕ್ಟೋಬರ್ ತಿಂಗಳ ವರದಿ ಗುರುವಾರ ತಿಳಿಸಿದೆ.
ದೇಶದ ಆರ್ಥಿಕತೆ ಸ್ಥಿರವಾಗಿದೆ. ಪ್ರಸಕ್ತ ಆರ್ಥಿಕ ವರ್ಷದುದ್ದಕ್ಕೂ ಬೆಳವಣಿಗೆ ಕಾಯ್ದುಕೊಳ್ಳಲಿದೆ ಎಂದು ತಿಳಿಸಿದೆ.
ಜಿಎಸ್‌ಟಿ ಇಳಿಕೆ ಕೂಡ ಚಿಲ್ಲರೆ ಹಣದುಬ್ಬರದ ಇಳಿಕೆಗೆ ನೆರವಾಗಿದೆ. ಇತ್ತೀಚೆಗಿನ ತೆರಿಗೆ ಸುಧಾರಣೆಗಳಿಂದ ಕುಟುಂಬದ ಮಟ್ಟದಲ್ಲಿ ವೆಚ್ಚಕ್ಕೆ ಹೆಚ್ಚು ಹಣ ಉಳಿಯುತ್ತಿದೆ ಎಂದು ತಿಳಿಸಿದೆ.
ಜಾಗತಿಕ ಮಾರುಕಟ್ಟೆಗಳಲ್ಲಿ ವ್ಯಾಪಾರ ಅನಿಶ್ಚಿತತೆ ಉಂಟಾಗಿದೆ. ಇದು ಪ್ರಗತಿಯನ್ನು ಮಂದಗೊಳಿಸಿದೆ. ಆದರೂ, ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ 7ರಿಂದ ಶೇ 7.5ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಇದು ದೇಶದ ಆರ್ಥಿಕ ಚಟುವಟಿಕೆಯ ಸದೃಢತೆಯನ್ನು ಸೂಚಿಸುತ್ತಿದೆ ಎಂದು ಹೇಳಿದೆ. ಸೆಪ್ಟೆಂಬರ್ ತ್ರೈಮಾಸಿಕದ ಜಿಡಿಪಿ ಪ್ರಗತಿ ಅಂಕಿ–ಅಂಶಗಳು ಶುಕ್ರವಾರ ಪ್ರಕಟವಾಗಲಿವೆ.
ವ್ಯಾಪಾರ ನಿಯಮಗಳಲ್ಲಿ ಅನಿಶ್ಚಿತತೆ, ಜಾಗತಿಕ ರಾಜಕೀಯ ಬಿಕ್ಕಟ್ಟು, ಷೇರುಪೇಟೆಯ ಏರಿಳಿತ ಸೇರಿದಂತೆ ಜಾಗತಿಕ ಅನಿಶ್ಚಿತತೆಯು ದೇಶದ ರಫ್ತು, ಬಂಡವಾಳ ಒಳಹರಿವು ಮತ್ತು ಹೂಡಿಕೆದಾರರ ಭಾವನೆ ಮೇಲೆ ಪರಿಣಾಮ ಬೀರಿವೆ ಎಂದು ತಿಳಿಸಿದೆ.
ಕಾರ್ಪೊರೇಟ್ ಕಂಪನಿಗಳ ಕಾರ್ಯಾಚರಣೆ ಆರೋಗ್ಯಕರವಾಗಿದ್ದು, ಸುಸ್ಥಿರ ಲಾಭ ಕಂಡಿವೆ. ಹೊಸದಾಗಿ ಬಂದಿರುವ ಕಾರ್ಮಿಕ ಸಂಹಿತೆಗಳು ‘ವಿಕಸಿತ ಭಾರತ’ದ ಗುರಿಗೆ ನೆರವಾಗಿವೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.