ಬೆಂಗಳೂರು: ಜಿಎಸ್‌ಟಿ ದರ ಇಳಿಕೆಯು ಸೆಪ್ಟೆಂಬರ್ 22ರಿಂದ ಜಾರಿಗೆ ಬಂದರೂ, ಎಫ್‌ಎಂಸಿಜಿ ಉತ್ಪನ್ನಗಳ ಬೆಲೆ ಇಳಿಕೆಯ ಪ್ರಯೋಜನವು ಗ್ರಾಹಕರಿಗೆ ಅಕ್ಟೋಬರ್ ಆರಂಭದಿಂದ ಅಥವಾ ಅಕ್ಟೋಬರ್ ಮಧ್ಯಭಾಗದಿಂದ ಸಿಗಲಿದೆ ಎಂದು ಗೋದ್ರೆಜ್ ಕನ್ಸ್ಯೂಮರ್ ಕಂಪನಿಯ ಸಿಇಒ ಸುಧೀರ್ ಸೀತಾಪತಿ ಹೇಳಿದ್ದಾರೆ.
ಹೆಚ್ಚಿನ ಎಂಆರ್‌ಪಿ ಇರುವ ಉತ್ಪನ್ನಗಳ ದಾಸ್ತಾನು ಕಂಪನಿಗಳು ಹಾಗೂ ವರ್ತಕರ ಬಳಿ ಇದೆ. ಹೀಗಾಗಿ, ಹಲವು ಉತ್ಪನ್ನಗಳ ಮೇಲಿನ ತೆರಿಗೆ ಪ್ರಮಾಣವನ್ನು ಶೇ 5ಕ್ಕೆ ಇಳಿಕೆ ಮಾಡಿರುವ ಕ್ರಮವು ಅಲ್ಪಾವಧಿಯ ಕೆಲವು ಅಡ್ಡಿಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದ್ದಾರೆ.
‘ಎಫ್‌ಎಂಸಿಜಿ ವಲಯವು ಗರಿಷ್ಠ ಮಾರಾಟ ಬೆಲೆ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಈಗ ಕಂಪನಿಗಳು ಹಾಗೂ ವರ್ತಕರ ಬಳಿ ಹೆಚ್ಚಿನ ಎಂಆರ್‌ಪಿ ಇರುವ ದಾಸ್ತಾನು ಇದೆ... ಹೊಸ ಎಂಆರ್‌ಪಿ ಇರುವ ಉತ್ಪನ್ನಗಳು ಮಾರುಕಟ್ಟೆಗೆ ಬರಲು ತುಸು ಸಮಯ ಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.
ಮುಂದಿನ ತಿಂಗಳ ಆರಂಭದಲ್ಲಿ ಅಥವಾ ಮಧ್ಯ ಭಾಗದಲ್ಲಿ ಗ್ರಾಹಕರು ಕಡಿಮೆ ಎಂಆರ್‌ಪಿ ಇರುವ ಉತ್ಪನ್ನಗಳನ್ನು ಕಾಣಬಹುದು ಎಂದು ಅವರು ಅಂದಾಜು ಮಾಡಿದ್ದಾರೆ.
ಜನಸಾಮಾನ್ಯರು ಹೆಚ್ಚಾಗಿ ಬಳಸುವ ಬಹುತೇಕ ಉತ್ಪನ್ನಗಳ ಮೇಲಿನ ತೆರಿಗೆ ದರವನ್ನು ಸೆಪ್ಟೆಂಬರ್ 22ರಿಂದ ಅನ್ವಯವಾಗುವಂತೆ ಕಡಿಮೆ ಮಾಡಲು ಜಿಎಸ್‌ಟಿ ಮಂಡಳಿಯು ಈಚೆಗೆ ತೀರ್ಮಾನಿಸಿದೆ.
‘ಜಿಎಸ್‌ಟಿ ಇಳಿಕೆಯ ಒಂದು ಪ್ರಯೋಜನವೆಂದರೆ, ತೆರಿಗೆ ಪ್ರಮಾಣ ಕಡಿಮೆ ಆಗಿರುವ ವರ್ಗದ ಉತ್ಪನ್ನಗಳಷ್ಟೇ ಅಲ್ಲದೆ, ಜಿಎಸ್‌ಟಿ ಕಡಿಮೆ ಆಗಿರದ ವರ್ಗಕ್ಕೆ ಸೇರಿದ ಉತ್ಪನ್ನಗಳ ಮಾರಾಟವೂ ಹೆಚ್ಚಳ ಕಾಣುತ್ತದೆ. ಏಕೆಂದರೆ, ಖರೀದಿಗೆ ಲಭ್ಯವಾಗುವ ಹಣದ ಮೊತ್ತ ಹೆಚ್ಚಾಗುತ್ತದೆ. ಹೀಗಾಗಿ ನಾವು ನಮ್ಮ ಎಲ್ಲ ಬಗೆಯ ಉತ್ಪನ್ನಗಳ ಮಾರಾಟವು ಹೆಚ್ಚಳ ಕಾಣುತ್ತದೆ ಎಂಬ ನಿರೀಕ್ಷೆ ಹೊಂದಿದ್ದೇವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.