ಜಿಎಸ್‌ಟಿ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್‌ಟಿ) ಮಹತ್ತರ ಸುಧಾರಣೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಬಹುತೇಕ ಎಲ್ಲಾ ಸರಕು ಮತ್ತು ಸೇವೆಗಳನ್ನು ಶೇ 5 ಮತ್ತು ಶೇ 18ರ ಸ್ಲ್ಯಾಬ್ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದ್ದು, ಈ ದೀಪಾವಳಿ ಯಿಂದಲೇ ನೂತನ ಬದಲಾವಣೆಯು ಅನುಷ್ಠಾನಕ್ಕೆ ಬರಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರಸ್ತುತ, ಅಗತ್ಯ ವಸ್ತುಗಳಿಗೆ ಶೂನ್ಯ, ದಿನನಿತ್ಯದ ಬಳಕೆ ವಸ್ತುಗಳಿಗೆ ಶೇ 5ರಷ್ಟು, ಗುಣಮಟ್ಟದ ಸರಕುಗಳಿಗೆ ಶೇ 12ರಷ್ಟು ಹಾಗೂ ಎಲೆಕ್ಟ್ರಾನಿಕ್ ಮತ್ತು ಸೇವೆಗಳಿಗೆ ಶೇ 18ರಷ್ಟು, ಐಷಾರಾಮಿ ಮತ್ತು ಅಪಾಯಕಾರಿ ಸರಕುಗಳಿಗೆ ಶೇ 28ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಸ್ಲ್ಯಾಬ್‌ಗಳ ಬದಲಾವಣೆ ಜಾರಿಯಾದ ಮೇಲೆ ಗ್ರಾಹಕರ ಮೇಲಿನ ತೆರಿಗೆ ಹೊರೆ ತಗ್ಗಲಿದೆ ಎಂದು ಆ ಮೂಲಗಳು ಮಾಹಿತಿ ನೀಡಿವೆ.
ಜಿಎಸ್‌ಟಿ ಮಂಡಳಿಯು ಪರಿಷ್ಕೃತ ವ್ಯವಸ್ಥೆಗೆ ಅನುಮೋದನೆ ನೀಡಿದ ನಂತರ, ಶೇ 12ರ ಸ್ಲ್ಯಾಬ್‌ನಲ್ಲಿರುವ ಶೇ 99ರಷ್ಟು ಸರಕುಗಳು ಶೇ 5ರ ತೆರಿಗೆ ವ್ಯಾಪ್ತಿಗೆ ಬರಲಿವೆ. ಅದೇ ರೀತಿ, ಶೇ 28ರ ಸ್ಲ್ಯಾಬ್‌ನಲ್ಲಿರುವ 90ರಷ್ಟು ಸರಕು ಮತ್ತು ಸೇವೆಗಳು ಶೇ 18ರ ತೆರಿಗೆ ವ್ಯಾಪ್ತಿಗೆ ಬರಲಿವೆ. ಕೇವಲ ಏಳು ವಸ್ತುಗಳ ಮೇಲೆ ಶೇ 40ರಷ್ಟು ವಿಶೇಷ ತೆರಿಗೆ ವಿಧಿಸಲಾಗುತ್ತದೆ. ತಂಬಾಕನ್ನು ಸಹ ಈ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದೂ ತಿಳಿಸಿವೆ.
ಜಿಎಸ್‌ಟಿ ಪರಿಷ್ಕರಣೆಯು ಖರೀದಿಗೆ ಗ್ರಾಹಕರಿಗೆ ಉತ್ತೇಜನ ನೀಡಲಿದೆ. ಕಳೆದ ಬಾರಿಯ ಜಿಎಸ್‌ಟಿ ಪರಿಷ್ಕರಣೆ ನಂತರ ಉಂಟಾದ ನಷ್ಟವನ್ನು ಇದು ಸರಿದೂಗಿಸಬಹುದು ಎಂಬ ನಿರೀಕ್ಷೆಯನ್ನೂ ಸರ್ಕಾರ ಹೊಂದಿದೆ. ವಜ್ರ ಮತ್ತು ಅಮೂಲ್ಯ ವಸ್ತುಗಳಂತಹ ರಫ್ತು ಆಧಾರಿತ ವಲಯಗಳು ಅಸ್ತಿತ್ವದಲ್ಲಿರುವ ತೆರಿಗೆ
ವ್ಯಾಪ್ತಿಯಲ್ಲಿಯೇ ಮುಂದುವರಿಯಲಿವೆ.
ಸುಂಕ ಸಮರದ ಈ ಕಾಲಘಟ್ಟ ದಲ್ಲಿ ಹೊರಗಿನ ಹೊಡೆತಗಳನ್ನು ತಡೆದುಕೊಳ್ಳಲು ಆಂತರಿಕ ಮಾರಾಟ ಹೆಚ್ಚಳವು ನೆರವಿಗೆ ಬರಲಿದೆ. ಆ ನಿಟ್ಟಿನಲ್ಲಿ ಸರ್ಕಾರದ ಹೆಜ್ಜೆ ಸರಿಯಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಶೇ 12ರ ಸ್ಲ್ಯಾಬ್‌ನಲ್ಲಿರುವ ಶೇ 99ರಷ್ಟು ಸರಕುಗಳು ಶೇ 5ರ ತೆರಿಗೆ ವ್ಯಾಪ್ತಿಗೆ
ಶೇ 28ರ ಸ್ಲ್ಯಾಬ್‌ನಲ್ಲಿರುವ 90ರಷ್ಟು ಸರಕು, ಸೇವೆ ಶೇ 18ರ ತೆರಿಗೆ ವ್ಯಾಪ್ತಿಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.