ನವದೆಹಲಿ: ಜಿಎಸ್‌ಟಿ ದರ ಪರಿಷ್ಕರಣೆಯಿಂದಾಗಿ ಮುಂದಿನ ಆರ್ಥಿಕ ವರ್ಷದಲ್ಲಿ ಪ್ರಯಾಣಿಕ ವಾಹನಗಳ ಮಾರಾಟವು ಮತ್ತೆ ಶೇಕಡ 7ರಷ್ಟಾಗುವ ನಿರೀಕ್ಷೆ ಇದೆ ಎಂದು ಮಾರುತಿ ಸುಜುಕಿ ಇಂಡಿಯಾದ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೊ ಬ್ಯಾನರ್ಜಿ ಹೇಳಿದ್ದಾರೆ.
ಸಣ್ಣ ಗಾತ್ರದ ವಾಹನಗಳ ವಿಭಾಗದಲ್ಲಿ ಮಾರಾಟವು ಶೇ 10ರಷ್ಟು ಏರಿಕೆ ಕಾಣಬಹುದು ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟದ (ಎಸ್‌ಐಎಎಂ) ಕಾರ್ಯಕ್ರಮದಲ್ಲಿ ಅವರು ಗುರುವಾರ ಹೇಳಿದ್ದಾರೆ.
ಸಣ್ಣ ಕಾರುಗಳ ದರವು ದುಬಾರಿ ಆಗಿದ್ದೂ ಸೇರಿದಂತೆ ಕೆಲವು ಕಾರಣಗಳಿಂದಾಗಿ ದೇಶೀ ಮಾರಾಟವು ಕಳೆದ ಕೆಲ ವರ್ಷದಿಂದ ಇಳಿಕೆ ಕಂಡಿತ್ತು ಎಂದು ತಿಳಿಸಿದ್ದಾರೆ.
ದೀರ್ಘಾವಧಿಯನ್ನು ಪರಿಗಣಿಸಿದರೆ ಕಾರುಗಳ ಮಾರಾಟದ ವಾರ್ಷಿಕ ಸಂಯುಕ್ತ ಬೆಳವಣಿಗೆ ದರವು (ಸಿಎಜಿಆರ್) ಶೇ 7ರಷ್ಟಿದೆ. ಮುಂದಿನ ಹಣಕಾಸು ವರ್ಷದಲ್ಲಿ ಕಾರು ಮಾರಾಟದ ಬೆಳವಣಿಗೆಯು ಈ ಪ್ರಮಾಣವನ್ನು ಮತ್ತೆ ತಲುಪುವ ನಿರೀಕ್ಷೆ ಇದೆ. ₹12 ಲಕ್ಷ ವಾರ್ಷಿಕ ಆದಾಯ ಹೊಂದಿದವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ, ರೆಪೊ ದರ ಇಳಿಕೆ ಮತ್ತು ಜಿಎಸ್‌ಟಿ ಪರಿಷ್ಕರಣೆಯು ದ್ವಿಚಕ್ರ ವಾಹನ ಹೊಂದಿರುವವರು ಕಾರನ್ನು ಖರೀದಿಸಲು ಉತ್ತೇಜನ ನೀಡಲಿದೆ ಎಂದು ಹೇಳಿದ್ದಾರೆ.
ಕಳೆದ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಆಗಸ್ಟ್ ಅವಧಿಯಲ್ಲಿ 17.31 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದವು. ಈ ಬಾರಿ 17.05 ಲಕ್ಷ ವಾಹನಗಳು ಮಾರಾಟವಾಗಿವೆ ಎಂದು ಉದ್ಯಮವು ಅಂದಾಜಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.