ಕೋಲ್ಕತ್ತ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ ಒಂದೇ ಹಂತದ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲು ದೇಶವು ‘ಇನ್ನೂ ಸಜ್ಜಾಗಿಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದರೆ ಜಿಎಸ್‌ಟಿ ಅಡಿಯಲ್ಲಿ ಒಂದೇ ಹಂತದ ತೆರಿಗೆ ವ್ಯವಸ್ಥೆಯನ್ನು ಭವಿಷ್ಯದಲ್ಲಿ ಜಾರಿಗೆ ತರುವ ಸಾಧ್ಯತೆ ಇದೆ ಎಂದು ಕೂಡ ಅವರು ಹೇಳಿದ್ದಾರೆ.
ಕೋಲ್ಕತ್ತದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಜಿಎಸ್‌ಟಿ ಅಡಿಯಲ್ಲಿ ನಾಲ್ಕು ತೆರಿಗೆ ಹಂತಗಳನ್ನು ಚರ್ಚಿಸದೆಯೇ ನಿಗದಿ ಮಾಡಿರಲಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಇದ್ದ ಭಿನ್ನ ತೆರಿಗೆ ಪ್ರಮಾಣಗಳನ್ನು ಸನಿಹದ ಹಂತಕ್ಕೆ ಜೋಡಿಸಲು ವ್ಯಾಪಕ ಕೆಲಸ ಆಗಿತ್ತು’ ಎಂದು ಹೇಳಿದ್ದಾರೆ.
‘ಜಿಎಸ್‌ಟಿ ದರಗಳ ಪರಿಶೀಲನೆ ನಡೆಸಿದಾಗ, ನಾಲ್ಕು ಹಂತಗಳ ತೆರಿಗೆ ವ್ಯವಸ್ಥೆಯು ಜಿಎಸ್‌ಟಿ ಮಂಡಳಿಗೆ ಸದಸ್ಯರಿಗೆ ಬೇಕಾಗಿಲ್ಲ ಎಂಬುದು ಗೊತ್ತಾಯಿತು. ಆದರೆ, ಒಂದೇ ಹಂತದ ತೆರಿಗೆ ವ್ಯವಸ್ಥೆಗೆ ಸಾಗಲು ಸಿದ್ಧರಿದ್ದಾರೆಯೇ ಎಂಬ ಪ್ರಶ್ನೆಗೆ ಇನ್ನೂ ಇಲ್ಲ ಎನ್ನುವ ಉತ್ತರ ಬಂತು. ಭವಿಷ್ಯದಲ್ಲಿ ಬಹುಶಃ ಅದು ಸಾಧ್ಯವಾಗಬಹುದು’ ಎಂದು ನಿರ್ಮಲಾ ತಿಳಿಸಿದ್ದಾರೆ.
ಜಿಎಸ್‌ಟಿ ವ್ಯವಸ್ಥೆಯಲ್ಲಿ ಈಗ ಆಗುತ್ತಿರುವ ಸುಧಾರಣೆಗಳನ್ನು ನಿರ್ಮಲಾ ಅವರು ‘ಮುಂದಿನ ತಲೆಮಾರಿನ ಸುಧಾರಣಾ ಕ್ರಮಗಳು’ ಎಂದು ಬಣ್ಣಿಸಿದ್ದಾರೆ. ಈ ಸುಧಾರಣಾ ಕ್ರಮಗಳು ಬಡವರು ಹಾಗೂ ಮಧ್ಯಮ ವರ್ಗದವರಿಗೆ ವ್ಯವಸ್ಥೆಯನ್ನು ಸರಳ ಹಾಗೂ ನ್ಯಾಯಸಮ್ಮತ ಆಗಿಸುವುದರತ್ತ ಗಮನ ನೀಡಿವೆ ಎಂದಿದ್ದಾರೆ.
ಜಿಎಸ್‌ಟಿ ವಿಚಾರವಾಗಿ ಏನಾದರೂ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎಂಟು ತಿಂಗಳ ಹಿಂದೆ ಸೂಚಿಸಿದ್ದರು ಎಂದು ನಿರ್ಮಲಾ ನೆನಪು ಮಾಡಿಕೊಂಡಿದ್ದಾರೆ.
ಜಿಎಸ್‌ಟಿ ಅಡಿ ಇರುವ ನಾಲ್ಕು ಹಂತಗಳ ತೆರಿಗೆ ವ್ಯವಸ್ಥೆಯನ್ನು, ಎರಡು ಹಂತಗಳ ತೆರಿಗೆ ವ್ಯವಸ್ಥೆಯನ್ನಾಗಿ ಪರಿವರ್ತಿಸಲು ಈಚೆಗೆ ನಡೆದ ಜಿಎಸ್‌ಟಿ ಮಂಡಳಿ ಸಭೆಯು ತೀರ್ಮಾನಿಸಿದೆ. ಎರಡು ಹಂತಗಳ ತೆರಿಗೆ ವ್ಯವಸ್ಥೆಯು (ಶೇ 5 ಹಾಗೂ ಶೇ 18ರಷ್ಟು ತೆರಿಗೆ) ಸೆಪ್ಟೆಂಬರ್ 22ರಿಂದ ಜಾರಿಗೆ ಬರುತ್ತಿದೆ. ತಂಬಾಕು ಹಾಗೂ ಐಷಾರಾಮಿ ಉತ್ಪನ್ನಗಳಿಗೆ ಶೇ 40ರಷ್ಟು ತೆರಿಗೆ ನಿಗದಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.