
ಚಂದ್ರಬಾಬು ನಾಯ್ಡು
ವಿಶಾಖಪಟ್ಟಣ (ಪಿಟಿಐ): ಅಮೆರಿಕದ ಆಡಳಿತವು ಎಚ್–1ಬಿ ವೀಸಾ ನಿಯಮಗಳನ್ನು ಈಚೆಗೆ ಬಿಗಿಗೊಳಿಸಿರುವುದು ಭಾರತದ ಪಾಲಿಗೆ ತಾತ್ಕಾಲಿಕ ಹಿನ್ನಡೆ ಮಾತ್ರ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಭಾರತದ ಐ.ಟಿ. ತಂತ್ರಜ್ಞರು ಕಂಪನಿಗಳಿಗೆ ಕಡಿಮೆ ವೆಚ್ಚಕ್ಕೆ ಕೆಲಸ ಮಾಡಿಕೊಡುವ ಕಾರಣದಿಂದ, ಅವರು ಎಚ್–1ಬಿ ವೀಸಾ ಪಡೆದು ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುವ ದಿನಗಳು ಮತ್ತೆ ಬರುತ್ತವೆ ಎಂದು ಅವರು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ತಂತ್ರಜ್ಞಾನ ವಲಯದಲ್ಲಿನ ಅವಕಾಶಗಳನ್ನು ಗುರುತಿಸಿ, ಹೈದರಾಬಾದ್ ನಗರವನ್ನು ತಂತ್ರಜ್ಞಾನದ ಕೇಂದ್ರವನ್ನಾಗಿ ಬೆಳೆಸಿದ ಶ್ರೇಯ ನಾಯ್ಡು ಅವರದ್ದಾಗಿದೆ. ಭಾರತದ ತಂತ್ರಜ್ಞರು ಹೆಚ್ಚಿನ ಕೌಶಲವನ್ನು ಹೊಂದಿದ್ದಾರೆ, ಕಡಿಮೆ ವೆಚ್ಚಕ್ಕೆ ಕೆಲಸ ಮಾಡಿಕೊಡುತ್ತಾರೆ. ಹೀಗಾಗಿ ಅವರಿಗೆ ಪ್ರಪಂಚದ ಎಲ್ಲೆಡೆ ಹೆಚ್ಚು ಬೇಡಿಕೆ ಇದೆ ಎಂದು ನಾಯ್ಡು ಹೇಳಿದ್ದಾರೆ.
ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದ ಐ.ಟಿ. ತಂತ್ರಜ್ಞರು ಎಚ್–1ಬಿ ವೀಸಾ ಪಡೆದು ಅಮೆರಿಕಕ್ಕೆ ಹೋಗುವ ಪ್ರಮಾಣ ಹೆಚ್ಚಿದೆ.
‘ವೆಚ್ಚವು ಬಹಳ ಮುಖ್ಯವಾದುದು... ಭಾರತದ ಟೆಕಿಗಳು ಕಡಿಮೆ ವೆಚ್ಚದ ಸೇವೆಗಳನ್ನು ಒದಗಿಸುತ್ತಿದ್ದಾರೆ. ಅಮೆರಿಕದವರು ನಮ್ಮ ಮೇಲೆ ಅವಲಂಬಿತರಾಗಿರುತ್ತಾರೆ’ ಎಂದು ನಾಯ್ಡು ಅವರು ಸಂದರ್ಶನದಲ್ಲಿ ಹೇಳಿದ್ದಾರೆ. ಭಾರತೀಯರ ಮೇಲೆ ವಿಧಿಸುವ ನಿರ್ಬಂಧವು ಅವರ ಪ್ರಗತಿಯನ್ನು ತಡೆಯುವುದಿಲ್ಲ ಎಂದೂ ಹೇಳಿದ್ದಾರೆ.