ADVERTISEMENT

ಮಾವಿಗೆ ತಟ್ಟಿದ ಬರದ ಬಿಸಿ: ಉತ್ಪಾದನೆ ಕುಸಿತ, ಬೆಳೆಗಾರರು ಕಂಗಾಲು

ಬಂಪರ್‌ ಇಳುವರಿ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರು

ಜೆ.ಆರ್.ಗಿರೀಶ್
Published 3 ಮೇ 2019, 20:00 IST
Last Updated 3 ಮೇ 2019, 20:00 IST
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಕಿರುವಾರ ಗ್ರಾಮದ ಮಾವಿನ ತೋಪಿನ ಮರಗಳಲ್ಲಿ ಕಾಯಿ ಕಟ್ಟಿರುವುದು.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಕಿರುವಾರ ಗ್ರಾಮದ ಮಾವಿನ ತೋಪಿನ ಮರಗಳಲ್ಲಿ ಕಾಯಿ ಕಟ್ಟಿರುವುದು.   

ಕೋಲಾರ: ಜಿಲ್ಲೆಯಲ್ಲಿ ಮಾವಿಗೂ ಬರದ ಬಿಸಿ ತಟ್ಟಿದ್ದು, ಈ ಬಾರಿ ಉತ್ಪಾದನೆ ಕುಸಿಯುವ ಆತಂಕ ಎದುರಾಗಿದೆ.

ಹಣ್ಣುಗಳ ರಾಜ ಎಂದೇ ಹೆಸರಾದ ಮಾವಿನ ಹಣ್ಣಿನ ಉತ್ಪಾದನೆಗೆ ಪ್ರಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಈ ಬಾರಿ ಮಾವಿನ ಮರಗಳು ಹೆಚ್ಚಿನ ಪ್ರಮಾಣದಲ್ಲಿ ಕಾಯಿ ಕಟ್ಟಿಲ್ಲ. ಬಂಪರ್‌ ಇಳುವರಿ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.

ಆಲ್ಫಾನ್ಸೊ, ಬಂಗನಪಲ್ಲಿ, ಕೇಸರ್, ಸೆಂಧೂರ, ದಶಹರಿ, ಮಲ್ಲಿಕಾ, ತೋತಾಪುರಿ, ರಾಜ್‌ಗಿರಾ, ಮಲಗೋವಾ, ನೀಲಮ್‌, ರಸಪುರಿ ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ಮಾವಿನ ತಳಿಗಳಿವೆ. ಜಿಲ್ಲೆಯಿಂದ ಗುಜರಾತ್‌, ಹಿಮಾಚಲ ಪ್ರದೇಶ, ಉತ್ತರಪ್ರದೇಶಕ್ಕೆ ಪ್ರತಿ ವರ್ಷ ಮಾವಿನ ಹಣ್ಣು ರಫ್ತಾಗುತ್ತದೆ. ಅಲ್ಲದೇ, ಯುರೋಪ್‌, ಅಮೆರಿಕ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅರಬ್‌ ರಾಷ್ಟ್ರಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ.

ADVERTISEMENT

ಜಿಲ್ಲೆಯಲ್ಲಿ ಸುಮಾರು 70 ಸಾವಿರ ರೈತರು ಮಾವು ಬೆಳೆದಿದ್ದಾರೆ. 2016ರಲ್ಲಿ ಮಾವು ಬೆಳೆ ವಿಸ್ತೀರ್ಣ 48,824 ಹೆಕ್ಟೇರ್ ಇತ್ತು. ಪ್ರಸ್ತುತ 51,632 ಹೆಕ್ಟೇರ್ ಪ್ರದೇಶದಲ್ಲಿ ಮಾವು ಇದೆ. ಹಿಂದಿನ 3 ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವು ಬೆಳೆ ವಿಸ್ತೀರ್ಣ 2,808 ಹೆಕ್ಟೇರ್‌ ಹೆಚ್ಚಳವಾಗಿದೆ. ಆದರೆ, ಹಿಂದಿನ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಮಳೆ ಕೈ ಕೊಟ್ಟಿದ್ದರಿಂದ ಮಾವು ಇಳುವರಿ ಕುಸಿತದ ಭೀತಿ ಎದುರಾಗಿದೆ.

ಹಿಂದಿನ ವರ್ಷ ಭರ್ಜರಿ ಮಾವಿನ ಫಸಲು ಬಂದಿತ್ತು. ಆದರೆ, ಬೆಲೆ ಕುಸಿತದಿಂದಾಗಿ ಸಾಕಷ್ಟು ರೈತರು ಮಾವು ಕಟಾವು ಮಾಡಲೇ ಇಲ್ಲ. ಮಾವಿನ ಹಣ್ಣು ಮರದಲ್ಲೇ ಕೊಳೆತು ರೈತರಿಗೆ ಹೆಚ್ಚಿನ ನಷ್ಟವಾಯಿತು. ಈ ಬಾರಿ ಬರವು ಮಾವು ಬೆಳೆಗಾರರಿಗೆ ದೊಡ್ಡ ಪೆಟ್ಟು ಕೊಟ್ಟಿದೆ. ಬರ ಪರಿಸ್ಥಿತಿ ನಡುವೆಯೂ ರೈತರು ಖಾಸಗಿ ಟ್ಯಾಂಕರ್‌ ಮಾಲೀಕರಿಂದ ನೀರು ಖರೀದಿಸಿ ಮರಗಳಿಗೆ ಹಾಯಿಸಿದ್ದಾರೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಬಂದಿಲ್ಲ.

3 ಹಂತದಲ್ಲಿ ಹೂವು: ಸಾಮಾನ್ಯವಾಗಿ ಡಿಸೆಂಬರ್‌ ಅಂತ್ಯದಲ್ಲಿ ಅಥವಾ ಜನವರಿ ಆರಂಭದಲ್ಲಿ ಮಾವಿನ ಮರಗಳಲ್ಲಿ ಹೂವು ಕಾಣಿಸಿಕೊಳ್ಳುತ್ತದೆ. ಆದರೆ, ಈ ಬಾರಿ ಮರಗಳು ನವೆಂಬರ್‌, ಡಿಸೆಂಬರ್‌ ಹಾಗೂ ಜನವರಿ ತಿಂಗಳಲ್ಲಿ 3 ಹಂತದಲ್ಲಿ ಹೂವು ಬಿಟ್ಟಿವೆ.

ಹವಾಮಾನ ವೈಪರಿತ್ಯದಿಂದಾಗಿ ಮಾವು ಬೆಳೆಯಲ್ಲಿ ಏರುಪೇರಾಗಿ ಫಸಲು ಕಡಿಮೆಯಾಗಿದೆ. ಮತ್ತೊಂದೆಡೆ ಜಿಲ್ಲೆಯಲ್ಲಿ ಇತ್ತೀಚೆಗೆ ಬಿರುಗಾಳಿ ಸಹಿತ ಮಳೆ ಸುರಿದಿದ್ದರಿಂದ ಸುಮಾರು 2 ಸಾವಿರ ಹೆಕ್ಟೇರ್‌ ಮಾವು ಬೆಳೆ ನಾಶವಾಗಿದೆ.

ನಿರೀಕ್ಷೆಯಂತೆ ಉತ್ತಮ ಮಳೆಯಾಗಿ ವಾತಾವರಣದಲ್ಲಿ ಉಷ್ಣತೆ ಮತ್ತು ತೇವಾಂಶ ಪ್ರಮಾಣ ಸಮತೋಲಿತವಾಗಿದ್ದರೆ ಹೆಕ್ಟೇರ್‌ಗೆ 8.46 ಟನ್‌ ಇಳುವರಿ ಬರುತ್ತದೆ. ಆದರೆ, ಈ ಬಾರಿ ಹೆಕ್ಟೇರ್‌ಗೆ ಸರಾಸರಿ 5 ಟನ್‌ ಇಳುವರಿ ನಿರೀಕ್ಷಿಸಲಾಗಿದೆ. ಹಿಂದಿನ ವರ್ಷ ಜಿಲ್ಲೆಯಲ್ಲಿ ಒಟ್ಟಾರೆ 5 ಲಕ್ಷ ಮೆಟ್ರಿಕ್‌ ಟನ್‌ ಮಾವು ಉತ್ಪಾದನೆಯಾಗಿತ್ತು.

ಮಾವಿನ ಗುಣ: ಒಂದು ವರ್ಷ ಕಡಿಮೆ ಹಾಗೂ ಮತ್ತೊಂದು ವರ್ಷ ಹೆಚ್ಚು ಇಳುವರಿ ನೀಡುವುದು ಮಾವಿನ ಮರದ ಗುಣ. 2014ರಲ್ಲಿ ಮಾವಿನ ಫಸಲು ಕಡಿಮೆಯಿತ್ತು. 2015 ಪೂರ್ಣ ಇಳುವರಿ ವರ್ಷವಾದರೂ ಮಳೆ ಮತ್ತು ಗಾಳಿಗೆ ಮಾವಿನ ಈಚು ಉದುರಿ ಬೆಳೆಗಾರರು ನಷ್ಟ ಅನುಭವಿಸಿದ್ದರು. 2016ರ ವರ್ಷವು ಕಡಿಮೆ ಇಳುವರಿ ವರ್ಷವಾದರೂ ಉತ್ತಮ ಫಸಲು ಬಂದಿತ್ತು. 2017ರಲ್ಲಿ ಇಳುವರಿ ಕುಸಿದರೆ 2018ರಲ್ಲಿ ಇಳುವರಿ ಭರ್ಜರಿಯಾಗಿತ್ತು. ಈ ಬಾರಿ ಕಡಿಮೆ ಇಳುವರಿ ವರ್ಷವಾಗಿದ್ದು, 3.25 ಲಕ್ಷ ಮೆಟ್ರಿಕ್‌ ಟನ್‌ ಮಾವು ಉತ್ಪಾದನೆ ಆಗಬಹುದೆಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಅಂಕಿ ಅಂಶ

* 51,632 ಹೆಕ್ಟೇರ್‌ ಮಾವು ಬೆಳೆ

* 70 ಸಾವಿರ ಮಂದಿ ಬೆಳೆಗಾರರು

* 2 ಸಾವಿರ ಹೆಕ್ಟೇರ್‌ ಬೆಳೆ ನಾಶ

* 3.25 ಲಕ್ಷ ಮೆಟ್ರಿಕ್‌ ಟನ್‌ ನಿರೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.