ADVERTISEMENT

ವಸತಿ ಮಾರಾಟ: 10 ವರ್ಷಗಳಲ್ಲೇ ಕನಿಷ್ಠ

ಜನವರಿ–ಜೂನ್ ಅವಧಿ: ನೈಟ್‌ ಫ್ರ್ಯಾಂಕ್‌ ವರದಿ

ಪಿಟಿಐ
Published 16 ಜುಲೈ 2020, 16:27 IST
Last Updated 16 ಜುಲೈ 2020, 16:27 IST
ಮನೆ
ಮನೆ   

ನವದೆಹಲಿ: ದೇಶದ ಪ್ರಮುಖ 8 ನಗರಗಳಲ್ಲಿ ವಸತಿ ಮಾರಾಟವು ಜನವರಿ–ಜೂನ್‌ ಅವಧಿಯಲ್ಲಿ 10 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ಆಸ್ತಿ ಸಲಹಾ ಸಂಸ್ಥೆ ನೈಟ್‌ ಫ್ರ್ಯಾಂಕ್‌ ಹೇಳಿದೆ.

ಕೊರೊನಾ ವೈರಾಣು ನಿಯಂತ್ರಿಸಲು ಮಾರ್ಚ್‌ನಲ್ಲಿ ಜಾರಿಗೊಳಿಸಿದ ಲಾಕ್‌ಡೌನ್‌ನಿಂದಾಗಿ ಬೇಡಿಕೆ ಕುಸಿತ ಕಂಡಿರುವುದೇ ಮಾರಾಟದಲ್ಲಿ ಇಳಿಕೆಯಾಗಲು ಕಾರಣ ಎಂದು ತಿಳಿಸಿದೆ.

2020ರ ಮೊದಲಾರ್ಧದ ಭಾರತದ ರಿಯಲ್‌ ಎಸ್ಟೇಟ್‌ ವರದಿ ಬಿಡುಗಡೆ ಮಾಡಿರುವ ಸಂಸ್ಥೆಯು, ಜನವರಿ–ಜೂನ್‌ ಅವಧಿಯಲ್ಲಿ ವಸತಿ ಮಾರಾಟ ಶೇ 54ರಷ್ಟು ಕುಸಿದಿದೆ ಎಂದು ಹೇಳಿದೆ.

ADVERTISEMENT

ಬೆಂಗಳೂರು, ದೆಹಲಿ ರಾಜಧಾನಿ ಪ್ರದೇಶ, ಮುಂಬೈ, ಕೋಲ್ಕತ್ತ, ಚೆನ್ನೈ, ಪುಣೆ, ಹೈದರಾಬಾದ್‌ ಮತ್ತು ಅಹಮದಾಬಾದ್‌ ನಗರಗಳಲ್ಲಿ ಮಾರಾಟ ಆಗಿರುವ ಮನೆಗಳ ಬಗ್ಗೆ ವರದಿಯಲ್ಲಿ ತಿಳಿಸಿದೆ.

ಜನವರಿ–ಮಾರ್ಚ್‌ ಅವಧಿಯಲ್ಲಿ ವಸತಿ ಮಾರಾಟ ಶೇ 27ರಷ್ಟು ಇಳಿಕೆಯಾಗಿದೆ. ಏಪ್ರಿಲ್‌–ಜೂನ್‌ ಅವಧಿಯಲ್ಲಿ ಶೇ 84ರಷ್ಟು ಕುಸಿತ ಕಂಡಿದೆ.

ಎರಡು ವರ್ಷಗಳ ಸ್ಥಿರ ಬೇಡಿಕೆಯ ನಂತರ ಎಂಟು ನಗರಗಳಲ್ಲಿ ಮನೆಗಳ ಮಾರಾಟ ಗಣನೀಯ ಕುಸಿತ ಕಂಡಿದೆ. ಹೊಸ ಮನೆಗಳ ಬೇಡಿಕೆಯೂ ಶೇ 46ರಷ್ಟು ಕಡಿಮೆಯಾಗಿದೆ.

‘ಭವಿಷ್ಯದ ಆದಾಯದ ಬಗ್ಗೆ ಅನಿಶ್ಚಿತತೆ ಎದುರಾಗಿರುವುದು ಮನೆಗಳ ಬೇಡಿಕೆಯ ಮೇಲೆ ಭಾರಿ ಪರೀಣಾಮ ಉಂಟುಮಾಡುತ್ತಿದೆ’ ಎಂದು ನೈಟ್‌ ಫ್ರ್ಯಾಂಕ್‌ ಇಂಡಿಯಾದ ಸಿಎಂಡಿ ಶಿಶಿರ್‌ ಬೈಜಲ್ ಹೇಳಿದ್ದಾರೆ.

‘ಸಾಲದ ಕಂತು ಪಾವತಿ ಅವಧಿ ಮುಂದೂಡಿಕೆ ಆಗಸ್ಟ್‌ಗೆ ಮುಕ್ತಾಯವಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ ಡೆವಲಪರ್‌ಗಳಿಗೆ ಒಂದು ಬಾರಿಗೆ ಸಾಲ ಮರುಹೊಂದಾಣಿಕೆ, ಗೃಹ ಸಾಲದ ಕಂತು ಪಾವತಿ ಅವಧಿ ಮತ್ತೊಮ್ಮೆ ವಿಸ್ತರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ.

ನಗರವಾರು ಇಳಿಕೆ

ದೆಹಲಿ ರಾಜಧಾನಿ ಪ್ರದೇಶ; 73%

ಅಹಮದಾಬಾದ್‌; 69%

ಚೆನ್ನೈ; 67%

ಬೆಂಗಳೂರು; 57%

ಮುಂಬೈ; 45%

ಪುಣೆ; 42%

ಹೈದರಾಬಾದ್; 42%

ಕೋಲ್ಕತ್ತ; 36%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.