ADVERTISEMENT

ಚಿನ್ನದ ಮೇಲೆ ಹೂಡಿಕೆ: ಎಷ್ಟು? ಯಾವಾಗ?

ವಿಜಯ್ ಜೋಷಿ
Published 23 ಜುಲೈ 2020, 19:31 IST
Last Updated 23 ಜುಲೈ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: 2015ರಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ಬೆಲೆಯು ಸರಾಸರಿ ₹26,343 ಆಗಿತ್ತು. ಈಗ 10 ಗ್ರಾಂ ಚಿನ್ನದ ಬೆಲೆ ₹ 50 ಸಾವಿರ ದಾಟಿದೆ. ಐದುವರ್ಷಗಳ ಹಿಂದೆ ಚಿನ್ನದ ಮೇಲೆ ಮಾಡಿದ್ದ ಹೂಡಿಕೆಯಲ್ಲಿ ಶೇಕಡ 89ರಷ್ಟು ಹೆಚ್ಚಳವಾದಂತೆ ಆಗಿದೆ. ಅಂದರೆ, ವಾರ್ಷಿಕವಾಗಿ ಶೇಕಡ 17.9ರಷ್ಟು ಸರಳ ಬಡ್ಡಿ ಸಿಕ್ಕಂತೆ!

2015ರಲ್ಲಿ ₹ 26,343 ಮೊತ್ತವನ್ನು ಒಳ್ಳೆಯ ರ್‍ಯಾಂಕಿಂಗ್ ಇರುವ ಒಂದು ಈಕ್ವಿಟಿ ಮ್ಯೂಚುವಲ್‌ ಫಂಡ್ (ಐಸಿಐಸಿಐ ಪ್ರುಡೆನ್ಷಿಯಲ್ ಯುಎಸ್‌ ಬ್ಲೂಚಿಪ್ ಈಕ್ವಿಟಿ‌ ಫಂಡ್‌) ಮೇಲೆ ಹೂಡಿಕೆ ಮಾಡಿದ್ದರೆ, ಆ ಮೊತ್ತ ಈಗ ₹ 48,745 ಆಗಿರುತ್ತಿತ್ತು. ಅಂದರೆ, ಇದು ಕೂಡ ಸರಿಸುಮಾರು ಚಿನ್ನದ ಮೇಲಿನ ಹೂಡಿಕೆಯಷ್ಟೇ ಲಾಭ ತಂದುಕೊಟ್ಟಿದೆ. ಮ್ಯೂಚುವಲ್‌ ಫಂಡ್‌ ಮೂಲಕ ಷೇರುಗಳ ಮೇಲೆ ಹೂಡಿಕೆ ಮಾಡುವುದು ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವುದರ ಮಹತ್ವವನ್ನು ಈ ಅಂಕಿ–ಅಂಶಗಳು ಹೇಳುತ್ತಿವೆ.

ವ್ಯಕ್ತಿಯ ಒಟ್ಟು ಹೂಡಿಕೆ ಹಾಗೂ ಉಳಿತಾಯದಲ್ಲಿ ಚಿನ್ನದ ಮೇಲಿನ ಹೂಡಿಕೆ ಮಹತ್ವದ್ದು ಎನ್ನುತ್ತಾರೆ ವೈಯಕ್ತಿಕ ಹಣಕಾಸು ಸಲಹೆಗಾರರು. ‘ಆದರೆ, ಚಿನ್ನದ ಬೆಲೆ ಗಗನಕ್ಕೆ ಏರಿರುವ ಹೊತ್ತಿನಲ್ಲಿ ಅದರ ಮೇಲೆ ಹೂಡಿಕೆ ಮಾಡಬೇಕಾಗಿಲ್ಲ. ಬೆಲೆ ಹೆಚ್ಚಳ ಆದಾಗ, ತಾವೂ ಇದರಲ್ಲಿ ಹೂಡಿಕೆ ಮಾಡೋಣ ಎಂದು ಹಲವರು ಅಂದುಕೊಳ್ಳುವುದು ಇದೆ. ಆದರೆ, ಇದು ಸೂಕ್ತ ಸಮಯವಲ್ಲ’ ಎಂದರು ಹೂಡಿಕೆ ಸಲಹಾ ವೇದಿಕೆ ಪ್ರೈಮ್‌ ಇನ್ವೆಸ್ಟರ್‌ನ ಸಹಸಂಸ್ಥಾಪಕಿ ವಿದ್ಯಾ ಬಾಲಾ.

ADVERTISEMENT

ಚಿನ್ನದ ಮೇಲೆ ಹೂಡಿಕೆ ಮಾಡಲು ಮನಸ್ಸುಳ್ಳವರಿಗೆ ಎಚ್ಚರಿಕೆಯ ಮಾತೊಂದನ್ನು ಹೇಳಿದ ವಿದ್ಯಾ, ‘ಒಂದೆರಡು ತಿಂಗಳುಗಳ ನಂತರ ಚಿನ್ನದ ಬೆಲೆಯಲ್ಲಿ ಇಳಿಕೆ ಕೂಡ ಆಗಬಹುದು. ಈಗ ಖರೀದಿಸಿದ ಚಿನ್ನದ ಮೌಲ್ಯ ಆಗ ಕಡಿಮೆ ಆಗಬಹುದು. ಹಾಗಾಗಿ, ಬೆಲೆ ಹೆಚ್ಚಿರುವ ಸಂದರ್ಭದಲ್ಲಿ ಚಿನ್ನದ ಮೇಲೆ ಹೂಡಿಕೆ ಆರಂಭಿಸುವುದು ಬೇಡ. ಚಿನ್ನದ ಬೆಲೆಯಲ್ಲಿ ಒಮ್ಮಗೇ ಭಾರಿ ಏರಿಕೆ ಆಗುವುದು, ನಂತರ ಕುಸಿಯುವುದು ಇದ್ದೇ ಇದೆ’ ಎಂದು ವಿಶ್ಲೇಷಿಸುತ್ತಾರೆ. ಅವರು ನೀಡುವ ಸಲಹೆಯ ಪ್ರಕಾರ ಹೂಡಿಕೆದಾರರು, ತಮ್ಮ ಒಟ್ಟು ಹೂಡಿಕೆ ಮೊತ್ತದಲ್ಲಿ ಶೇಕಡ 10ರಿಂದ 15ರಷ್ಟನ್ನು ಚಿನ್ನಕ್ಕಾಗಿ ಮೀಸಲಿಡಬಹುದು.

‘ಕೆಲವು ಸಂದರ್ಭಗಳಲ್ಲಿ ಚಿನ್ನವು ಈಕ್ವಿಟಿ ಮೇಲಿನ ಹೂಡಿಕೆಗಿಂತಲೂ ಹೆಚ್ಚಿನ ಲಾಭ ತಂದುಕೊಟ್ಟಿದೆ. ಆದರೆ, ಈ ಹೂಡಿಕೆಯ ಜೊತೆ ಬೆಲೆ ಕುಸಿತದ ಅಪಾಯಗಳೂ ಇದ್ದೇ ಇರುತ್ತವೆ. ಇದರಲ್ಲಿ ಹೂಡಿಕೆ ಮಾಡುವ ಮನಸ್ಸು ಇರುವವರು ಕೇಂದ್ರ ಸರ್ಕಾರದ ಚಿನ್ನದ ಬಾಂಡ್‌ಗಳ ಮೇಲೆ ಹಣ ಹೂಡುವುದು ಒಳ್ಳೆಯದು’ ಎನ್ನುತ್ತಾರೆ ತೆರಿಗೆ ಸಲಹೆಗಾರ ವಿಶ್ವಾಸ್ ಎನ್.ಪ್ರಭು.

ಚಿನ್ನದ ಮೇಲೆ ಹೂಡಿಕೆ ಮಾಡಿದವರು ತಮ್ಮ ನಿರೀಕ್ಷೆಗಳನ್ನು ಅತಿಯಾಗಿ ಇರಿಸಿಕೊಳ್ಳುವುದು ಸರಿಯಲ್ಲ. ಚಿನ್ನದ ಬೆಲೆ ಎಲ್ಲ ಸಂದರ್ಭಗಳಲ್ಲೂ ಸುಸ್ಥಿರ ರೀತಿಯಲ್ಲಿ ಏರಿಕೆ ಕಾಣುವುದಿಲ್ಲ. ಚಿನ್ನದ ಮೇಲಿನ ಹೂಡಿಕೆಯನ್ನು ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ರೀತಿಯಲ್ಲಿ ಆರಂಭಿಸುವುದು ಸೂಕ್ತ ಎಂಬುದು ವಿದ್ಯಾ ಅವರ ಕಿವಿಮಾತು.

ಹೂಡಿಕೆಗೆ ಡಿಜಿಟಲ್ ಮಾರ್ಗ

ಚಿನ್ನವನ್ನು ಭೌತಿಕವಾಗಿ ಖರೀದಿಸಿ ಇಟ್ಟುಕೊಳ್ಳುವುದಕ್ಕಿಂತ, ಡಿಜಿಟಲ್ ರೂಪದಲ್ಲಿ ಖರೀದಿಸುವುದು ಹೆಚ್ಚು ಅನುಕೂಲಕರ. ಫೋನ್‌ಪೆ, ಗೂಗಲ್‌ಪೆನಂತಹ ಆ್ಯಪ್‌ ಬಳಸಿ, ಕನಿಷ್ಠ ₹ 1ರಿಂದ ಚಿನ್ನ ಖರೀದಿ ಆರಂಭಿಸಬಹುದು. ಈ ವೇದಿಕೆಗಳ ಮೂಲಕ ಖರೀದಿಸಿದ ಚಿನ್ನವನ್ನು ಸುಲಭವಾಗಿ ಮಾರಾಟ ಕೂಡ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.