ADVERTISEMENT

ಚಲನಶೀಲ ನಗರಗಳ ಸಾಲಿನಲ್ಲಿ ಹೈದರಾಬಾದ್‌ಗೆ ಮೊದಲ ಸ್ಥಾನ

ಮೊದಲ ಸ್ಥಾನದಿಂದ ಹಿಂಬಡ್ತಿ ಪಡೆದ ಬೆಂಗಳೂರು

ಪಿಟಿಐ
Published 19 ಜನವರಿ 2020, 19:30 IST
Last Updated 19 ಜನವರಿ 2020, 19:30 IST
ಚಾರ್‌ಮೀನಾರ್
ಚಾರ್‌ಮೀನಾರ್   
""

ನವದೆಹಲಿ: ಹೈದರಾಬಾದ್‌ ನಗರವು ವಿಶ್ವದ 130 ಚಲನಶೀಲ ನಗರಗಳ ಸಾಲಿನಲ್ಲಿ ಮೊದಲ ಸ್ಥಾನದ ಗೌರವಕ್ಕೆ ಪಾತ್ರವಾಗಿದೆ.

ಹಿಂದಿನ ವರ್ಷ ಈ ಗೌರವಕ್ಕೆ ಪಾತ್ರವಾಗಿದ್ದ ಬೆಂಗಳೂರು ಈಗ ಎರಡನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದೆ. ಜಾಗತಿಕ ಆಸ್ತಿ ಸಲಹಾ ಸಂಸ್ಥೆ ಜೆಎಲ್‌ಎಲ್‌ ಇಂಡಿಯಾ ವರದಿಯಲ್ಲಿ ಈ ಮಾಹಿತಿ ಇದೆ.

ಸಾಮಾಜಿಕ ಮತ್ತು ಆರ್ಥಿಕ ಮಾನದಂಡಗಳು, ರಿಯಲ್‌ ಎಸ್ಟೇಟ್‌ ಮಾರುಕಟ್ಟೆ, ಆರ್ಥಿಕ ಚಟುವಟಿಕೆಗಳನ್ನು ಪರಿಗಣಿಸಿ ಗರಿಷ್ಠ ಮಟ್ಟದ ಕ್ರಿಯಾಶೀಲ ನಗರಗಳ ಶ್ರೇಯಾಂಕ ನಿಗದಿಪಡಿಸಲಾಗಿದೆ.

ADVERTISEMENT

ಆರ್ಥಿಕ ವೃದ್ಧಿ (ಜಿಡಿಪಿ) ದರ, ರಿಟೇಲ್‌ ಮಾರಾಟ ಮತ್ತು ವಿಮಾನ ಪ್ರಯಾಣಿಕರ ಹೆಚ್ಚಳ ಮತ್ತಿತರ ಆರ್ಥಿಕ ಮಾನದಂಡಗಳ ವಿಷಯದಲ್ಲಿ ಹೈದರಾಬಾದ್‌ ಮುಂಚೂಣಿಯಲ್ಲಿ ಇದೆ.

ಕುಂಠಿತ ಆರ್ಥಿಕ ಪ್ರಗತಿಯ ಹೊರತಾಗಿಯೂ ದೇಶದ ಏಳು ನಗರಗಳು ಮೊದಲ 20 ನಗರಗಳ ಶ್ರೇಯಾಂಕದಲ್ಲಿ ಸ್ಥಾನ ಪಡೆದಿರುವುದು ಜೆಎಲ್‌ಎಲ್‌ನ ‘ನಗರ ಚಲನಶೀಲ ಸೂಚ್ಯಂಕ’ (ಸಿಎಂಐ) ದಲ್ಲಿ ದಾಖಲಾಗಿದೆ.

‘ಭಾರತದ ಅತ್ಯಂತ ತ್ವರಿತವಾಗಿ ಬೆಳವಣಿಗೆ ದಾಖಲಿಸುತ್ತಿರುವ ನಗರಗಳು ಸಾಗರೋತ್ತರ ಹೂಡಿಕೆದಾರರ ಗಮನ ಸೆಳೆಯುತ್ತಿವೆ. ದೇಶಿ ಆರ್ಥಿಕತೆಯು ಮಂದಗತಿಯಲ್ಲಿ ಪ್ರಗತಿ ಕಾಣುತ್ತಿದ್ದರೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರ್ಥಿಕ ಸುಧಾರಣಾ ಕ್ರಮಗಳಿಂದಾಗಿ ಉದ್ದಿಮೆ – ವಹಿವಾಟಿನಲ್ಲಿ ಪಾರದರ್ಶಕತೆ ಹೆಚ್ಚುತ್ತಿದೆ. ಇದರಿಂದ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚುತ್ತಿದೆ’ ಎಂದು ಜೆಎಲ್‌ಎಲ್‌ ಇಂಡಿಯಾದ ಸಿಇಒ ರಮೇಶ್‌ ನಾಯರ್‌ ಹೇಳಿದ್ದಾರೆ.

‘ದಕ್ಷಿಣ ಭಾರತದ ನಗರಗಳಲ್ಲಿ ವಾಣಿಜ್ಯ ಉದ್ದೇಶದ ರಿಯಲ್‌ ಎಸ್ಟೇಟ್‌ ವಹಿವಾಟು ಗಣನೀಯ ಬೆಳವಣಿಗೆ ಕಾಣುತ್ತಿದೆ. 2019ರಲ್ಲಿ ಹೈದರಾಬಾದ್‌ ನಗರವು ಬೆಂಗಳೂರಿಗೆ ತೀವ್ರ ಸ್ಪರ್ಧೆ ನೀಡುತ್ತಲೇ ಗಮನಾರ್ಹ ಬೆಳವಣಿಗೆ ಕಂಡಿದೆ. ತಂತ್ರಜ್ಞಾನ ಆಧಾರಿತ ಆರ್ಥಿಕ ಪ್ರಗತಿ ದಾಖಲಿಸುತ್ತಿದೆ. ತಂತ್ರಜ್ಞಾನ ಮತ್ತು ಇ–ಕಾಮರ್ಸ್‌ನ ದೈತ್ಯ ಕಂಪನಿಗಳನ್ನು ಆಕರ್ಷಿಸುತ್ತಿದೆ.

‘ರಾಜ್ಯ ಸರ್ಕಾರದ ಉದ್ಯಮ ಸ್ನೇಹಿ ನೀತಿ, ಗರಿಷ್ಠ ಗುಣಮಟ್ಟದ ಮೂಲ ಸೌಕರ್ಯಗಳು, ಪ್ರತಿಭಾನ್ವಿತರ ಲಭ್ಯತೆ, ಶ್ರೇಷ್ಠ ಗುಣಮಟ್ಟದ ಉದ್ದಿಮೆ ಪಾರ್ಕ್‌ಗಳು ಹೈದರಾಬಾದ್‌ ನಗರವನ್ನು ಸ್ಪರ್ಧಾತ್ಮಕತೆಯಲ್ಲಿ ಮುಂಚೂಣಿಗೆ ತಂದು ನಿಲ್ಲಿಸಿವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.