ನವದೆಹಲಿ: ‘ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ, ಎಚ್‌ಡಿಎಫ್‌ಸಿ ಲಿಮಿಟೆಡ್ ವಿಲೀನಗೊಳ್ಳುವ ಪೂರ್ವದಲ್ಲೇ, ಐಸಿಐಸಿಐ ಬ್ಯಾಂಕ್ ಎಚ್‌ಡಿಎಫ್‌ಸಿ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವದೊಂದಿಗೆ ಮುಂದೆ ಬಂದಿತ್ತು. ಆದರೆ, ಅದನ್ನು ನಿರಾಕರಿಸಲಾಗಿತ್ತು’ ಎಂದು ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಮಾಜಿ ಅಧ್ಯಕ್ಷ ದೀಪಕ್ ಪಾರೇಖ್ ಹೇಳಿದ್ದಾರೆ.
ಐಸಿಐಸಿಐ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಚಂದಾ ಕೊಚ್ಚಾರ್ ಅವರೊಂದಿಗೆ ನಡೆದ ಸಂವಾದದಲ್ಲಿ ದೀಪಕ್ ಪಾರೇಖ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಇಬ್ಬರ ನಡುವಿನ ಸಂವಾದವು ಯೂಟ್ಯೂಬ್‌ನಲ್ಲಿ ಪ್ರಸಾರಗೊಂಡಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಂಗಸಂಸ್ಥೆ ಎಚ್‌ಡಿಎಫ್‌ಸಿ ಲಿಮಿಟೆಡ್. 2023ರಲ್ಲಿ ಎಚ್‌ಡಿಎಫ್‌ಸಿ ಲಿಮಿಟೆಡ್ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ವಿಲೀನಗೊಂಡು ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿ ಹೊರಹೊಮ್ಮಿತು. ಕುತೂಹಲಕಾರಿ ಸಂಗತಿ ಎಂದರೆ, 40 ವರ್ಷಗಳ ಹಿಂದೆ ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಆರಂಭಕ್ಕೆ ಆರ್ಥಿಕ ನೆರವು ನೀಡಿದ್ದು ಐಸಿಐಸಿಐ ಬ್ಯಾಂಕ್‌ನ ಅಂಗಸಂಸ್ಥೆಯಾದ ಐಸಿಐಸಿಐ ಲಿಮಿಟೆಡ್.
ಸಂವಾದದಲ್ಲಿ ಈ ಕುರಿತು ಪ್ರಸ್ತಾಪಿಸಿದ ಪಾರೇಖ್, ’ಒಮ್ಮೆ ನೀವು ನನ್ನನ್ನು (ಎಚ್‌ಡಿಎಫ್‌ಸಿ ಲಿಮಿಟೆಡ್) ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವದೊಂದಿಗೆ ಮುಂದೆ ಬಂದದ್ದು ನೆನಪಿದೆ. ಎಚ್‌ಡಿಎಫ್‌ಸಿ ಲಿಮಿಟೆಡ್ ಆರಂಭಿಸಿದ್ದು ಐಸಿಐಸಿಐ. ಹಾಗಾಗಿ ನೀವು ನಿಮ್ಮ ತವರು ಮನೆಗೆ ಮರಳಿ ಬರಬಹುದಲ್ಲವೇ ಎನ್ನುವ ಪ್ರಸ್ತಾವ ಇಟ್ಟಿದ್ದೀರಿ. ಆದರೆ, ಇದು ನ್ಯಾಯೋಚಿತವಲ್ಲ. ನಮ್ಮ ಹೆಸರು ಮತ್ತು ಬ್ಯಾಂಕ್‌ಗೆ ಇದು ಸೂಕ್ತವಲ್ಲ ಎನ್ನುವ ಕಾರಣಕ್ಕೆ ನಾವು ಆಗ ಈ ಪ್ರಸ್ತಾವವನ್ನು ನಿರಾಕರಿಸಿದ್ದೆವು’ ಎಂದು ಪಾರೇಖ್, ಚಂದಾ ಕೊಚ್ಚಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.