ADVERTISEMENT

ICICI Bank Minimum Balance: ಕನಿಷ್ಠ ಮೊತ್ತ; ಹಿಂದೆ ಸರಿದ ಐಸಿಐಸಿಐ ಬ್ಯಾಂಕ್

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 16:18 IST
Last Updated 13 ಆಗಸ್ಟ್ 2025, 16:18 IST
ಐಸಿಐಸಿಐ ಬ್ಯಾಂಕ್‌
ಐಸಿಐಸಿಐ ಬ್ಯಾಂಕ್‌   

ಬೆಂಗಳೂರು: ಮಹಾನಗರ ಹಾಗೂ ನಗರ ಪ್ರದೇಶಗಳ ಗ್ರಾಹಕರು ಉಳಿತಾಯ ಖಾತೆಯಲ್ಲಿ ಇರಿಸಬೇಕಿರುವ ಮಾಸಿಕ ಕನಿಷ್ಠ ಸರಾಸರಿ ಮೊತ್ತವನ್ನು ₹50 ಸಾವಿರಕ್ಕೆ ಹೆಚ್ಚಿಸಿದ್ದ ಐಸಿಐಸಿಐ ಬ್ಯಾಂಕ್‌ ಈಗ ಆ ತೀರ್ಮಾನದಿಂದ ಹಿಂದೆ ಸರಿದಿದೆ.

ಮಹಾನಗರ ಹಾಗೂ ನಗರ ಪ್ರದೇಶಗಳ ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಮಾಸಿಕ ಕನಿಷ್ಠ ಸರಾಸರಿ ಮೊತ್ತವಾಗಿ ₹15 ಸಾವಿರ ಇರಿಸಿದರೆ ಸಾಕು ಎಂದು ಹೊಸ ನಿಯಮದಲ್ಲಿ ಹೇಳಿದೆ. ಆಗಸ್ಟ್‌ 1ರ ನಂತರ ಖಾತೆ ತೆರೆದವರಿಗೆ ಈ ನಿಯಮ ಅನ್ವಯವಾಗುತ್ತದೆ.

ಉಳಿತಾಯ ಖಾತೆಯಲ್ಲಿ ಇರಿಸಬೇಕಾದ ಮಾಸಿಕ ಕನಿಷ್ಠ ಸರಾಸರಿ ಮೊತ್ತವನ್ನು ₹50 ಸಾವಿರಕ್ಕೆ ಹೆಚ್ಚಿಸಿದ ಬ್ಯಾಂಕ್‌ನ ನಡೆಯನ್ನು ಹಲವರು ಟೀಕಿಸಿದ್ದರು.

ADVERTISEMENT

ಮಂಗಳವಾರ ಪ್ರಕಟಿಸಿರುವ ಹೊಸ ನಿಯಮಗಳ ಪ್ರಕಾರ ಅರೆ ನಗರ ಪ್ರದೇಶಗಳ ಗ್ರಾಹಕರು ಮಾಸಿಕ ಕನಿಷ್ಠ ಸರಾಸರಿ ಮೊತ್ತವಾಗಿ ₹7,500, ಗ್ರಾಮೀಣ ಪ್ರದೇಶಗಳ ಗ್ರಾಹಕರು ₹2,500 ಇರಿಸಿದರೆ ಸಾಕು.

‘ಮಾಸಿಕ ಸರಾಸರಿ ಮೊತ್ತದ ವಿಚಾರವಾಗಿ ಹೊಸ ನಿಯಮವೊಂದನ್ನು ನಾವು ಜಾರಿಗೆ ತಂದಿದ್ದೆವು. ಆದರೆ ಗ್ರಾಹಕರಿಂದ ಪಡೆದ ಮೌಲ್ಯಯುತ ಸಲಹೆಗಳನ್ನು ಗಮನಿಸಿ ಈಗ ಈ ನಿಯಮವನ್ನು ಪರಿಷ್ಕರಿಸುತ್ತಿದ್ದೇವೆ. ಇವು ಗ್ರಾಹಕರ ನಿರೀಕ್ಷೆ ಹಾಗೂ ಆದ್ಯತೆಗಳನ್ನು ಹೆಚ್ಚು ಸೂಕ್ತವಾಗಿ ಪ್ರತಿಬಿಂಬಿಸುತ್ತಿವೆ’ ಎಂದು ಬ್ಯಾಂಕ್‌ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.