ADVERTISEMENT

ವಿಮೆ ವಹಿವಾಟು ವಿಸ್ತರಣೆಗೆ ಐಡಿಬಿಐ ಫೆಡರಲ್‌ ಲೈಫ್‌ ಇನ್ಶುರೆನ್ಸ್‌ ಕ್ರಮ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 2:26 IST
Last Updated 23 ಅಕ್ಟೋಬರ್ 2020, 2:26 IST
ಐಡಿಬಿಐ ಫೆಡರಲ್‌ ಲೈಫ್‌ ಇನ್ಶುರೆನ್ಸ್‌ನ ಸಿಇಒ ವಿಘ್ನೇಶ್‌ ಶಹಾನೆ
ಐಡಿಬಿಐ ಫೆಡರಲ್‌ ಲೈಫ್‌ ಇನ್ಶುರೆನ್ಸ್‌ನ ಸಿಇಒ ವಿಘ್ನೇಶ್‌ ಶಹಾನೆ   

ಬೆಂಗಳೂರು: ಕೋವಿಡ್‌ ಪಿಡುಗಿನಿಂದಾಗಿ ಆರ್ಥಿಕತೆಯು ನಿಧಾನವಾಗಿ ಚೇತರಿಕೆಯ ಹಾದಿಗೆ ಮರಳುತ್ತಿರುವ ಸದ್ಯದ ಸಂದರ್ಭದಲ್ಲಿ ತನ್ನ ವಿಮೆ ಪಾಲಿಸಿಗಳ ವಿತರಣಾ ಜಾಲವನ್ನು ಬಲಪಡಿಸಲು ಐಡಿಬಿಐ ಫೆಡರಲ್‌ ಲೈಫ್‌ ಇನ್ಶುರೆನ್ಸ್‌ ಕಾರ್ಯೋನ್ಮುಖವಾಗಿದೆ.

‘ನಮ್ಮ ಒಡೆತನದ ಏಜೆನ್ಸಿಗಳು, ಆನ್‌ಲೈನ್‌ ಮತ್ತು ನೇರ ಮಾರಾಟದ ಮೂಲಕ ವಿಮೆ ಉತ್ಪನ್ನಗಳ ಮಾರಾಟ ಜಾಲ ವಿಸ್ತರಿಸಲಾಗುವುದು. ಕಂಪನಿಯ ಪಾಲು ಬಂಡವಾಳದ ಹಂಚಿಕೆಗೆ ಸಂಬಂಧಿಸಿದ ಅನಿಶ್ಚಿತತೆ ಈಗ ದೂರವಾಗಿದೆ. ಐಡಿಬಿಐ ಬ್ಯಾಂಕ್‌ ತನ್ನ ಶೇ 27ರಷ್ಟು ಪಾಲು ಬಂಡವಾಳವನ್ನು ಇತರ ಪಾಲುದಾರರಾದ ಏಜಿಸ್‌ ಮತ್ತು ಫೆಡರಲ್‌ ಬ್ಯಾಂಕ್‌ಗೆ ಮಾರಾಟ ಮಾಡಿದೆ. ಮೂರು ವರ್ಷಗಳ ಹಿಂದೆ ಆರಂಭಗೊಂಡಿದ್ದ ಈ ಪ್ರಕ್ರಿಯೆಯು ಕೆಲ ಕಾರಣಕ್ಕೆ ವಿಳಂಬವಾಗಿ ಈಗ ಪೂರ್ಣಗೊಂಡಿದೆ. ನಾವು ಈಗ ಭವಿಷ್ಯದ ವಹಿವಾಟು ವಿಸ್ತರಣೆಯತ್ತ ಗಮನ ಕೇಂದ್ರೀಕರಿಸಿದ್ದೇವೆ’ ಎಂದು ಐಡಿಬಿಐ ಫೆಡರಲ್‌ ಲೈಫ್‌ ಇನ್ಶುರೆನ್ಸ್‌ನ ಸಿಇಒ ವಿಘ್ನೇಶ್‌ ಶಹಾನೆ ಅವರು ಹೇಳಿದ್ದಾರೆ.

‘62 ಶಾಖೆಗಳು ಮತ್ತು 12 ಸಾವಿರದಷ್ಟಿರುವ ಏಜೆಂಟರ ಮೂಲಕ ಏಜೆನ್ಸಿ ವಹಿವಾಟನ್ನು ಲಾಭದಾಯಕ ರೀತಿಯಲ್ಲಿ ವಿಸ್ತರಿಸಲಾಗುವುದು. ಆನ್‌ಲೈನ್‌ ವಹಿವಾಟಿಗೂ ಹೆಚ್ಚು ಗಮನ ನೀಡಲಾಗುವುದು. ದಕ್ಷಿಣ ಭಾರತದಲ್ಲಿ ಫೆಡರಲ್‌ ಬ್ಯಾಂಕ್‌ನಿಂದಾಗಿ ಕಂಪನಿಯು ವ್ಯಾಪಕ ವಿತರಣಾ ಜಾಲ ಹೊಂದಿದೆ. ಪಿಡುಗಿನ ಹೊರತಾಗಿಯೂ ಈ ವರ್ಷ ದಕ್ಷಿಣದ ಮಾರುಕಟ್ಟೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 26ರಷ್ಟು ವಹಿವಾಟು ವೃದ್ಧಿ ದಾಖಲಿಸಿದೆ. ರಾಜ್ಯದ ವಹಿವಾಟಿನಲ್ಲಿ ಬೆಂಗಳೂರು ಅತಿದೊಡ್ಡ ಮಾರುಕಟ್ಟೆಯಾಗಿದೆ.

ADVERTISEMENT

‘ನಗರ ಪ್ರದೇಶಗಳಲ್ಲಿ ಬ್ಯಾಂಕಿಂಗ್‌ ಮತ್ತು ವಿಮೆ ಸೌಲಭ್ಯ ಬಳಕೆ ವ್ಯಾಪಕವಾಗಿದೆ. ಸಣ್ಣ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ವಿಮೆ ವಹಿವಾಟು ವಿಸ್ತರಣೆಗೆ ವಿಪುಲ ಅವಕಾಶಗಳು ಇವೆ. ಕೋವಿಡ್‌ ಬಿಕ್ಕಟ್ಟು, ಜೀವ ವಿಮೆಯ ಪ್ರಯೋಜನಗಳ ಬಗ್ಗೆ ಜನರು ಆಲೋಚಿಸುವಂತೆ ಮಾಡಿದೆ. ಗ್ರಾಮೀಣ ಪ್ರದೇಶದ ಜನರಲ್ಲಿ ವಿಮೆ ಬಗೆಗಿನ ತಿಳಿವಳಿಕೆ ಹೆಚ್ಚುತ್ತಿದೆ. ಈ ಮಾರುಕಟ್ಟೆಗಳಲ್ಲಿ ನಮ್ಮ ವಹಿವಾಟಿಗೆ ಹೆಚ್ಚಿನ ಅವಕಾಶಗಳು ಇವೆ.

‘ಕೋವಿಡ್‌ ಪಿಡುಗಿನಿಂದಾಗಿ ಜನರಲ್ಲಿ ವಿಮೆಯ ಮಹತ್ವ ಮನದಟ್ಟಾಗುತ್ತಿದೆ. ಅದರಲ್ಲೂ ಅವಧಿ ವಿಮೆ ಮತ್ತು ಆರೋಗ್ಯ ವಿಮೆಯ ಪ್ರಯೋಜನಗಳ ಬಗ್ಗೆ ಅರಿವು ಹೆಚ್ಚುತ್ತಿದೆ. ವಿಮೆ ಉದ್ದಿಮೆಯು ಈಗ ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿದೆ. ಹೊಸ ಆನ್‌ಲೈನ್‌ ಟರ್ಮ್‌ ಪ್ಲ್ಯಾನ್‌ಗೆ ಬೇಡಿಕೆ ಹೆಚ್ಚುತ್ತಿದೆ. ಮಧ್ಯಮಾವಧಿ ಮತ್ತು ದೀರ್ಘಾವಧಿಯಲ್ಲಿ ವಿಮೆ ಉದ್ದಿಮೆಯು ಗಮನಾರ್ಹ ಪ್ರಗತಿ ಸಾಧಿಸಲಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.