ADVERTISEMENT

ವೋಡಾಫೋನ್‌ ಐಡಿಯಾ ಸ್ಥಗಿತಗೊಂಡರೆ 13,000 ನಿರುದ್ಯೋಗ ಸೃಷ್ಟಿ!

ಏಜೆನ್ಸೀಸ್
Published 18 ಫೆಬ್ರುವರಿ 2020, 8:52 IST
Last Updated 18 ಫೆಬ್ರುವರಿ 2020, 8:52 IST
ವೊಡಾಫೋನ್‌ ಐಡಿಯಾ
ವೊಡಾಫೋನ್‌ ಐಡಿಯಾ   

ನವದೆಹಲಿ: ಬಾಕಿ ಪಾವತಿಗೆ ಕಾಲಾವಕಾಶ ಕೋರಿ ವೊಡಾಫೋನ್‌ ಐಡಿಯಾ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಇದರಿಂದಾಗಿ ವೋಡಾಫೋನ್‌ ಐಡಿಯಾ ಕಾರ್ಯಸ್ಥಗಿತಗೊಳಿಸುವ ಸ್ಥಿತಿ ಎದುರಾದರೆ, ದೇಶದ ಆರ್ಥಿಕತೆಯ ಮೇಲೆ ಮತ್ತಷ್ಟು ಹೊರೆಯಾಗಲಿದೆ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಹೂಡಿಕೆ ಹೆಜ್ಜೆ ಹಿಂದಿಡುವ ಸಾಧ್ಯತೆ ಹೆಚ್ಚಲಿದೆ.

ಬ್ರಿಟನ್‌ನ ವೊಡಾಫೋನ್‌ ಗ್ರೂಪ್‌ ಮತ್ತು ಭಾರತದ ಐಡಿಯಾ ಸೆಲ್ಯುಲಾರ್‌ ಜಂಟಿಯಾಗಿ ನಡೆಸುತ್ತಿರುವ ವೊಡಾಫೋನ್‌ ಐಡಿಯಾ, ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಇಕ್ಕಟ್ಟಿಗೆ ಸಿಲುಕಿದೆ. ದೂರ ಸಂಪರ್ಕ ಇಲಾಖೆಯು ಕೂಡಲೇ ಬಾಕಿ ಮೊತ್ತ ಪಾವತಿಸುವಂತೆ ಶುಕ್ರವಾರ ನೋಟಿಸ್‌ ನೀಡಿತ್ತು. ಸೋಮವಾರ ₹2,500 ಕೋಟಿ ಪಾವತಿಸಿರುವ ವೊಡಾಫೋನ್‌ ಐಡಿಯಾ, ಫೆ.21ರೊಳಗೆ ₹1,000 ಕೋಟಿ ಪಾವತಿಸುವುದಾಗಿ ಹೇಳಿದೆ. ಆದರೆ, ಕೋರ್ಟ್‌ ಮುಂದಿನ ವಿಚಾರಣೆ ವೇಳೆಗೆ ಬಾಕಿ ಪೂರ್ಣ ಪಾವತಿ ಮಾಡುವುದು ಅನಿವಾರ್ಯವಾಗಿದೆ.

ತರಂಗಾಂತರ ಬಳಕೆ ಹಾಗೂ ಪರವಾನಗಿ ಶುಲ್ಕ ಸೇರಿದಂತೆ ವೊಡಾಫೋನ್‌ ಐಡಿಯಾ ಸರ್ಕಾರಕ್ಕೆ ಒಟ್ಟು ₹53,000 ಕೋಟಿ ಪಾವತಿಸಬೇಕಿದೆ. ಒಮ್ಮೆಗೆ ದೊಡ್ಡ ಮೊತ್ತ ಪಾವತಿ ಮಾಡಲು ಸಾಧ್ಯವಾಗದೆ, ಕಂತುಗಳಲ್ಲಿ ಪಾವತಿ ಮಾಡಲು ಮನವಿ ಮಾಡಿದೆ. ಕಳೆದ 11 ವರ್ಷಗಳಲ್ಲೇ ಅತ್ಯಂತ ನಿಧಾನ ಗತಿಯ ಬೆಳವಣಿಗೆ ಕಂಡಿರುವ ವೊಡಾಫೋನ್‌ ಐಡಿಯಾ, 13,000 ಸಿಬ್ಬಂದಿ ಹಾಗೂ ಸುಮಾರು ₹27,150 ಕೋಟಿ ಬ್ಯಾಂಕ್‌ ಸಾಲ ಹೊಂದಿದೆ. ಅಕಸ್ಮಾತ್‌, ಕಂಪನಿ ಕಾರ್ಯಸ್ಥಗಿತಗೊಳಿಸಬೇಕಾದ ಸಂದರ್ಭ ಎದುರಾದರೆ ಭಾರತದ ಆರ್ಥಿಕತೆಯಲ್ಲಿ ತಲ್ಲಣ ಉಂಟು ಮಾಡಬಹುದಾಗಿದೆ.

ADVERTISEMENT

ಇದು ದೇಶದ ಹಣಕಾಸು ಕೊರತೆಯನ್ನು 40 ಬೇಸಿಸ್‌ ಅಂಶಗಳವರೆಗೂ ಹೆಚ್ಚಿಸುತ್ತದೆ ಎಂದು ಮೋತಿಲಾಲ್‌ ಓಸ್ವಾಲ್‌ನ ರಿಸರ್ಚ್‌ ಅನಲಿಸ್ಟ್‌ ಅಲಿಅಸ್ಗರ್‌ ಶಕಿರ್‌ ಅಭಿಪ್ರಾಯ ಪಟ್ಟಿದ್ದಾರೆ.

ಹಣಕಾಸು ಕೊರತೆಯಲ್ಲಿ 40 ಬೇಸಿಸ್‌ ಅಂಶಗಳ ಹೆಚ್ಚಳವನ್ನು ಆದಾಯದ ಲೆಕ್ಕದಲ್ಲಿ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆಸುಮಾರು ₹1 ಲಕ್ಷ ಕೋಟಿ ನಷ್ಟವಾಗಲಿದೆ. ಹತ್ತಕ್ಕೂ ಹೆಚ್ಚು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶದಲ್ಲಿ ನೇರ ತೆರಿಗೆ ಸಂಗ್ರಹದಲ್ಲೂ ಇಳಿಕೆಯಾಗಿದೆ.

ವೊಡಾಫೋನ್‌ ಐಡಿಯಾ ಮರೆಗೆ ಸರಿದರೆ ದೇಶದಲ್ಲಿ ಭಾರ್ತಿ ಏರ್‌ಟೆಲ್‌ ಮತ್ತು ರಿಲಯನ್ಸ್‌ ಜಿಯೊ ಎರಡನೇ ಕಂಪನಿಗಳು ಮಾರುಕಟ್ಟೆ ಪ್ರಭುತ್ವ ಹೊಂದಲಿವೆ. ಇದೇ ಮಾರ್ಚ್‌ ಕೊನೆಗೆ 5ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆಯಲ್ಲಿ ಆಸಕ್ತಿ ಕುಸಿಯಲು ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ಈ ಎಲ್ಲ ಅಂಶಗಳೂ ಹೂಡಿಕೆದಾರರನ್ನು ದೂರ ಉಳಿಯುವಂತೆ ಮಾಡಿದೆ. ಮಂಗಳವಾರ ವೊಡಾಫೋನ್‌ ಐಡಿಯಾ ಷೇರು ಶೇ 16ರಷ್ಟು ಕುಸಿದಿದೆ.

ಪರಿಹಾರ ಮಾರ್ಗಕ್ಕಾಗಿ ಹುಡುಕಾಟ

ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆಯಾಗದಂತೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸರ್ಕಾರ ಯೋಚಿಸುತ್ತಿದೆ. ಮಾರ್ಚ್‌ 17ರೊಳಗೆ ಪರಿಹಾರ ಮಾರ್ಗ ರೂಪಿಸುವ ಪ್ರಯತ್ನ ನಡೆದಿದೆ. ಪ್ರಧಾನಿ ಕಾರ್ಯಾಲಯದೊಂದಿಗೆ ದೂರ ಸಂಪರ್ಕ ಸಚಿವಾಲಯ ಚರ್ಚಿಸುತ್ತಿರುವುದಾಗಿ ಉನ್ನತ ಮೂಲಗಳಿಂದ ತಿಳಿದು ಬಂದಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ.

ಟೆಲಿಕಾಂ ವಲಯದ ವಕೀಲರ ಪ್ರಕಾರ, ಟೆಲಿಕಾಂ ಕಂಪನಿಗಳು ಬಾಕಿ ಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡುವಂತೆ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಬಹುದಾಗಿದೆ.

ದೇಶದಲ್ಲಿ ಪ್ರತಿ ತಿಂಗಳು ಸುಮಾರು 10 ಲಕ್ಷ ಮಂದಿ ಉದ್ಯೋಗ ವಲಯ ಪ್ರವೇಶಿಸುತ್ತಿದ್ದಾರೆ. ಆದರೆ, ಉದ್ಯೋಗ ಸೃಷ್ಟಿಯಾಗದ ಬಗ್ಗೆ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿದೆ.ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ₹10 ಲಕ್ಷ ಕೋಟಿ ಹೊರೆ ಅನುಭವಿಸುತ್ತಿವೆ.ಟೆಲಿಕಾಂ ಕಂಪನಿಯು ಸುಪ್ರೀಂ ಕೋರ್ಟ್‌ನಲ್ಲಿ ಕ್ಯುರೇಟಿವ್‌ ಮನವಿ ಸಲ್ಲಿಸಲು ಅವಕಾಶವಿದೆ ಎಂದು ಕಾನೂನು ವಿಶ್ಲೇಷಕರು ಹೇಳಿದ್ದಾರೆ.

ಭಾರ್ತಿ ಏರ್‌ಟೆಲ್‌₹35,586 ಕೋಟಿ ಬಾಕಿ ಪೈಕಿ, ಸೋಮವಾರ ₹10,000 ಕೋಟಿ ಪಾವತಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.