ನವದೆಹಲಿ: ದೇಶದ ಕೈಗಾರಿಕಾ ಉತ್ಪಾದನೆ ಬೆಳವಣಿಗೆಯು ಅಕ್ಟೋಬರ್ ತಿಂಗಳಲ್ಲಿ ಶೇ 3.5ಕ್ಕೆ ಇಳಿದಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಗುರುವಾರ ತಿಳಿಸಿದೆ.
ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ) ಆಧಾರದ ಮೇಲೆ ಲೆಕ್ಕ ಹಾಕುವ ಈ ಬೆಳವಣಿಗೆಯು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇದು ಶೇ 11.9ರಷ್ಟಿತ್ತು. ಗಣಿಗಾರಿಕೆ, ವಿದ್ಯುತ್ ಮತ್ತು ತಯಾರಿಕ ವಲಯದಲ್ಲಿ ಉತ್ಪಾದನೆ ಇಳಿಕೆ ಆಗಿದ್ದರಿಂದ ಬೆಳವಣಿಗೆ ದರವು ಕುಸಿದಿದೆ ಎಂದು ತಿಳಿಸಿದೆ. ಸೆಪ್ಟೆಂಬರ್‌ನಲ್ಲಿ ಶೇ 3.1 ದಾಖಲಾಗಿತ್ತು.
ತಯಾರಿಕಾ ವಲಯದ ಬೆಳವಣಿಗೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಶೇ 10.6 ಇತ್ತು. ಅದು ಈ ಬಾರಿ ಶೇ 4.1ಕ್ಕೆ ಇಳಿದಿದೆ. ಗಣಿಗಾರಿಕೆ ಮತ್ತು ವಿದ್ಯುತ್ ಉತ್ಪಾದನೆ ಕ್ರಮವಾಗಿ ಶೇ 0.9 ಮತ್ತು ಶೇ 2ರಷ್ಟಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕ್ರಮವಾಗಿ ಶೇ 13.1 ಮತ್ತು ಶೇ 20.4ರಷ್ಟಿತ್ತು.
ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಅಕ್ಟೋಬರ್ ಅವಧಿಯಲ್ಲಿ ಐಐಪಿ ಬೆಳವಣಿಗೆ ಶೇ 4ರಷ್ಟಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 7ರಷ್ಟಿತ್ತು ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.