ADVERTISEMENT

ಆರ್ಥಿಕ ಹಿಂಜರಿತ ತಡೆಗೆ ಭಾರತ ತುರ್ತು ಕ್ರಮ ಕೈಗೊಳ್ಳಬೇಕು: ಐಎಂಎಫ್‌

ಏಜೆನ್ಸೀಸ್
Published 24 ಡಿಸೆಂಬರ್ 2019, 4:50 IST
Last Updated 24 ಡಿಸೆಂಬರ್ 2019, 4:50 IST
ಐಎಂಎಫ್‌
ಐಎಂಎಫ್‌   

ವಾಷಿಂಗ್ಟನ್:ಆರ್ಥಿಕ ಹಿಂಜರಿತ ಹಿಮ್ಮೆಟ್ಟಿಸಲು ಭಾರತ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.

ವೆಚ್ಚ ಮತ್ತು ಹೂಡಿಕೆ ಕುಸಿತ, ತೆರಿಗೆ ಆದಾಯದಲ್ಲಿ ಇಳಿಕೆಯು ಇತರ ಅಂಶಗಳ ಜತೆ ಸೇರಿಕೊಂಡು ವಿಶ್ವದಲ್ಲಿ ವೇಗವಾಗಿ ಆರ್ಥಿಕ ಬೆಳವಣಿಗೆ ಹೊಂದುತ್ತಿರುವ ಭಾರತದ ಓಟಕ್ಕೆ ತಡೆಯೊಡ್ಡಿದೆ ಎಂದು ಐಎಂಎಫ್ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಲಕ್ಷಾಂತರ ಜನರನ್ನು ಬಡತನದಿಂದ ಮುಕ್ತಗೊಳಿಸಿದ ಬಳಿಕ ಇದೀಗ ಭಾರತವು ಗಮನಾರ್ಹ ಆರ್ಥಿಕ ಹಿಂಜರಿತಕ್ಕೊಳಗಾಗಿದೆ ಎಂದು ಐಎಂಎಫ್‌ನ ಏಷ್ಯಾ ಪೆಸಿಫಿಕ್ ವಿಭಾಗದ ರನಿಲ್ ಸಲ್ಗಾಡೊ ಹೇಳಿದ್ದಾರೆ.

ADVERTISEMENT

‘ಈಗ ಎದುರಿಸುತ್ತಿರುವ ಆರ್ಥಿಕ ಹಿಂಜರಿತ ಹಿಮ್ಮೆಟ್ಟಿಸಲು ಮತ್ತು ಭಾರತವನ್ನು ಹೆಚ್ಚಿನ ಆರ್ಥಿಕ ಅಭಿವೃದ್ಧಿಯತ್ತ ಕೊಂಡೊಯ್ಯಲು ತುರ್ತು ನೀತಿ ಮತ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ಆರ್ಥಿಕ ಬೆಳವಣಿಗೆ ಸಲುವಾಗಿ ಜನರ ಖರೀದಿ ಸಾಮರ್ಥ್ಯ ಹೆಚ್ಚಿಸುವಂತೆ ಮಾಡುವ ವಿಷಯದಲ್ಲೂ ಭಾರತ ಸರ್ಕಾರದ ಮುಂದೆ ಸೀಮಿತ ಆಯ್ಕೆಗಳಷ್ಟೇ ಇವೆ ಎಂದೂ ಐಎಂಎಫ್ ಎಚ್ಚರಿಕೆ ನೀಡಿದೆ.

‘ಭಾರತವು ತನ್ನ ವಿತ್ತೀಯ ಕೊರತೆ ಗುರಿ ಕಾಯ್ದುಕೊಳ್ಳಬೇಕಾಗಿದ್ದು, ಆ ಉದ್ದೇಶ ಸಾಧನೆಗೆ ವೆಚ್ಚದಲ್ಲಿ ದಕ್ಷತೆ ಮತ್ತು ವರಮಾನ ಸಂಗ್ರಹದಲ್ಲಿ ಹೆಚ್ಚಳ ಸಾಧಿಸಬೇಕಾಗಿದೆ’ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್‌ ಶುಕ್ರವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.