ADVERTISEMENT

ಪಾಕ್‌ಗೆ ₹8,500 ಕೋಟಿ ಸಾಲ ನೀಡಿದ ಐಎಂಎಫ್‌: ಭಾರತ ಆಕ್ಷೇಪ

ಪಿಟಿಐ
Published 10 ಮೇ 2025, 15:47 IST
Last Updated 10 ಮೇ 2025, 15:47 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಭಾರತದ ತೀವ್ರ ಆಕ್ಷೇಪದ ನಡುವೆಯೂ ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್‌) ಪಾಕಿಸ್ತಾನಕ್ಕೆ ಮೊದಲ ಕಂತಿನಲ್ಲಿ ₹8,500 ಕೋಟಿ ಸಾಲ ನೀಡಲು ಅನುಮೋದನೆ ನೀಡಿದೆ. 

ಸಾಲ ವಿಸ್ತರಣೆ ಕಾರ್ಯಕ್ರಮದಡಿ ಪಾಕಿಸ್ತಾನಕ್ಕೆ ಹೊಸದಾಗಿ ಒಟ್ಟು ₹19,500 ಕೋಟಿ ಸಾಲ ನೀಡಲು ಐಎಂಎಫ್‌ ಮುಂದಾಗಿದೆ. ಸಾಲ ನಿಲುವಳಿಗೆ ಮತ ಚಲಾಯಿಸುವುದಕ್ಕೆ ನಡೆದ ಸಭೆಯಿಂದ ಭಾರತವು ದೂರ ಉಳಿಯುವ ಮೂಲಕ ಆಕ್ಷೇಪ ವ್ಯಕ್ತಪಡಿಸಿದೆ. 

ಐಎಂಎಫ್‌ ನೀಡಿರುವ ಸಾಲದ ಮರುಪಾವತಿಯಲ್ಲಿ ಪಾಕಿಸ್ತಾನದ ಸಾಧನೆ ತೀರಾ ಕಳಪೆಯಾಗಿದೆ. ಇಂತಹ ಸ್ಥಿತಿಯೂ ಆ ದೇಶಕ್ಕೆ ಹೊಸದಾಗಿ ಸಾಲ ನೀಡುವುದು ಸರಿಯಾದ ಕ್ರಮವಲ್ಲ. ಈ ಹಣವನ್ನು ಗಡಿಯಾಚೆಗಿನ ಭಯೋತ್ಪಾದನೆಗೆ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಚಾರ ಸಚಿವಾಲಯ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿದೆ.

ADVERTISEMENT

ಮತ್ತೊಂದೆಡೆ ಐಎಂಎಫ್‌ ತೀರ್ಮಾನವು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಭಾರತವು ಮತದಾನ ಪ್ರಕ್ರಿಯೆಯಿಂದ ಹೊರಗುಳಿದಿದ್ದನ್ನು ಕಾಂಗ್ರೆಸ್‌ ಟೀಕಿಸಿದೆ.

ಅದು ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲ. ಅಂತರರಾಷ್ಟ್ರೀಯ ಭಯೋತ್ಪಾದಕ ನಿಧಿ. ಕೇಂದ್ರಾಡಳಿತ ಪ್ರದೇಶದ ಗಡಿ ನಾಶ ಮಾಡುವ ಯುದ್ಧ ಸಾಮಗ್ರಿಗಳ ಖರೀದಿಗಾಗಿ ಪಾಕಿಸ್ತಾನಕ್ಕೆ ನೆರವು ನೀಡುತ್ತಿದೆ.
ಒಮರ್‌ ಅಬ್ದುಲ್ಲಾ, ಕಾಶ್ಮೀರ ಮುಖ್ಯಮಂತ್ರಿ

‘ಪಹಲ್ಗಾಮ್‌ ದಾಳಿಯು ಪಾಕಿಸ್ತಾನ ಪ್ರಾಯೋಜಿತವಾಗಿದೆ. ಇಂತಹ ದೇಶಕ್ಕೆ ಸಾಲ ಮಂಜೂರು ಮಾಡಿರುವುದು ಆಶ್ಚರ್ಯ ಮತ್ತು ಬೇಸರದ ಸಂಗತಿ. ಈ ನೆರವು ಪಾಕಿಸ್ತಾನದ ಸೇನಾಡಳಿತವನ್ನು ಶಾಶ್ವತಗೊಳಿಸಲಿದೆ ಅಷ್ಟೆ’ ಎಂದು ಲೋಕಸಭೆಯ ವಿರೋಧ ಪಕ್ಷದ ಉಪ ನಾಯಕ ಗೌರವ್‌ ಗೊಗೋಯಿ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಜೈರಾಮ್‌ ರಮೇಶ್‌, ‘ಪಾಕಿಸ್ತಾನಕ್ಕೆ ಸಾಲ ನೀಡದಂತೆ ವಿರುದ್ಧ ಮತ ಚಲಾಯಿಸಲು ಸರ್ಕಾರಕ್ಕೆ ಆಗ್ರಹಿಸಿದ್ದೆವು. ಆದರೆ, ಭಾರತ ಮತದಾನದಿಂದಲೇ ದೂರ ಉಳಿದಿದೆ’ ಎಂದಿದ್ದಾರೆ.

ಕಾಂಗ್ರೆಸ್‌ ವಿರುದ್ಧ ಟೀಕೆ:

ಕಾಂಗ್ರೆಸ್‌ ನಾಯಕರ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ‘ಕಾಂಗ್ರೆಸ್ ನಾಯಕರು ವಾಸ್ತವಾಂಶ ತಿರುಚಿ ದೇಶದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಐಎಂಎಫ್‌ನಲ್ಲಿ ಸಾಲ ನೀಡದಂತೆ ವಿರೋಧಿಸಿ ಸಭೆಯಲ್ಲಿ ಮತ ಚಲಾಯಿಸುವ ಅವಕಾಶವೇ ಇಲ್ಲ’ ಎಂದಿದ್ದಾರೆ.

ನೆರವು ಪುನರ್ ಪರಿಶೀಲಿಸಿ: ಆರ್‌ಎಸ್‌ಎಸ್‌

ಪಾಕಿಸ್ತಾನಕ್ಕೆ ಘೋಷಿಸಿರುವ ಸಾಲದ ನೆರವನ್ನು ಐಎಂಎಫ್‌ ಪುನರ್‌ ಪರಿಶೀಲಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಅಂಗಸಂಸ್ಥೆಯಾದ ಸ್ವದೇಶಿ ಜಾಗರಣ್‌ ಮಂಚ್ (ಎಸ್‌ಜೆಎಂ) ಆಗ್ರಹಿಸಿದೆ.

ಪಾಕಿಸ್ತಾನವು ಭಯೋತ್ಪಾದನೆಗೆ ನಿರಂತರವಾಗಿ ಬೆಂಬಲ ನೀಡುತ್ತಿದೆ. ಇಂತಹ ದೇಶಕ್ಕೆ ಸಾಲ ನೆರವು ನೀಡಿರುವುದು ತೀವ್ರ ಆತಂಕ ಸೃಷ್ಟಿಸಿದೆ. ಈ ಹಿಂದೆ ಆ ದೇಶವು ಪಡೆದಿರುವ ಸಾಲವನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಎಸ್‌ಜೆಎಂ ರಾಷ್ಟ್ರೀಯ ಸಹ ಸಂಚಾಲಕ ಅಶ್ವನಿ ಮಹಾಜನ್ ಹೇಳಿದ್ದಾರೆ.

ಐಎಂಎಫ್‌ ಪಾಕಿಸ್ತಾನಕ್ಕೆ ಉಗ್ರ ನಿಧಿ ನೀಡುತ್ತಿದೆ. ಅಮೆರಿಕ ಜಪಾನ್ ಜರ್ಮನಿ ಇದಕ್ಕೆ ಹೇಗೆ ಒಪ್ಪಿಗೆ ಸೂಚಿಸಿವೆ ಎಂಬುದು ತಿಳಿಯುತ್ತಿಲ್ಲ.
ಅಸಾದುದ್ದೀನ್ ಓವೈಸಿ, ಎಐಎಂಐಎಂ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.