ನವದೆಹಲಿ: ಆದಾಯ ತೆರಿಗೆ ಮರುಪಾವತಿಗಳ ಮೊತ್ತವು ಕಳೆದ 11 ವರ್ಷಗಳ ಅವಧಿಯಲ್ಲಿ ಶೇಕಡ 474ರಷ್ಟು ಹೆಚ್ಚಳ ಕಂಡು, 2024–25ರಲ್ಲಿ ₹4.77 ಲಕ್ಷ ಕೋಟಿಗೆ ತಲುಪಿದೆ. ಇದೇ ಅವಧಿಯಲ್ಲಿ ಒಟ್ಟು ತೆರಿಗೆ ಸಂಗ್ರಹ ಪ್ರಮಾಣವು ಶೇ 274ರಷ್ಟು ಮಾತ್ರ ಹೆಚ್ಚಾಗಿದೆ.
ಆದಾಯ ತೆರಿಗೆ ರೂಪದಲ್ಲಿ ಕಡಿತ ಮಾಡಿಕೊಂಡ ಮೊತ್ತದ ಮರುಪಾವತಿಗೆ 2013ರಲ್ಲಿ ಸರಾಸರಿ 93 ದಿನಗಳು ಬೇಕಾಗುತ್ತಿದ್ದವು. ಆದರೆ ಇದು 2024ರಲ್ಲಿ 17 ದಿನಗಳಿಗೆ ಇಳಿಕೆ ಕಂಡಿದೆ ಎಂದು ಮೂಲಗಳು ಹೇಳಿವೆ.
ಯುಪಿಎ ಆಡಳಿತ ಅವಧಿಯ ಕೊನೆಯ ವರ್ಷವಾದ 2013–14ರಲ್ಲಿ ಆದಾಯ ತೆರಿಗೆ ಇಲಾಖೆ ಮಾಡಿದ ಮರುಪಾವತಿಗಳ ಮೊತ್ತವು ₹83 ಸಾವಿರ ಕೋಟಿ ಆಗಿತ್ತು. ಆದರೆ 2025–25ನೆಯ ಹಣಕಾಸು ವರ್ಷದ ಅಂತ್ಯಕ್ಕೆ ಈ ಮೊತ್ತವು ₹4.77 ಲಕ್ಷ ಕೋಟಿಗೆ ಹೆಚ್ಚಿದೆ.
2024–25ರಲ್ಲಿ ಒಟ್ಟು ತೆರಿಗೆ ಸಂಗ್ರಹವು ₹27.03 ಲಕ್ಷ ಕೋಟಿ ಆಗಿದೆ. ಇದು 2013–14ರಲ್ಲಿ ₹7.22 ಲಕ್ಷ ಕೋಟಿ ಆಗಿತ್ತು. 2013ರ ನಂತರದಲ್ಲಿ ಆದಾಯ ತೆರಿಗೆ ವಿವರ ಸಲ್ಲಿಕೆಯಲ್ಲಿ ಶೇ 133ರಷ್ಟು ಹೆಚ್ಚಳ ಆಗಿದೆ. 2013ರಲ್ಲಿ ಒಟ್ಟು 3.8 ಕೋಟಿ ಆದಾಯ ತೆರಿಗೆ ವಿವರಗಳು ಸಲ್ಲಿಕೆಯಾಗಿದ್ದವು. ಇದು 2024ರಲ್ಲಿ 8.89 ಕೋಟಿಗೆ ಹೆಚ್ಚಿದೆ.
ತೆರಿಗೆ ಆಡಳಿತ ವ್ಯವಸ್ಥೆಯಲ್ಲಿ ತಂದ ಸುಧಾರಣೆಗಳ ಕಾರಣದಿಂದಾಗಿ ಆದಾಯ ತೆರಿಗೆ ಮರುಪಾವತಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ, ಮರುಪಾವತಿಗೆ ತೆಗೆದುಕೊಳ್ಳುವ ಅವಧಿಯು ಕಡಿಮೆ ಆಗಿದೆ ಎಂದು ಮೂಲಗಳು ವಿವರಿಸಿವೆ. ಅದರಲ್ಲೂ ಮುಖ್ಯವಾಗಿ, ಸಂಪೂರ್ಣವಾಗಿ ಆನ್‌ಲೈನ್ ಮೂಲಕ ತೆರಿಗೆ ವಿವರ ಸಲ್ಲಿಕೆ, ಡಿಜಿಟಲ್ ವ್ಯವಸ್ಥೆಯ ಮೂಲಕವೇ ತೆರಿಗೆ ವಿಚಾರಗಳನ್ನು ಇತ್ಯರ್ಥಪಡಿಸುವ ಸೌಲಭ್ಯ ಜಾರಿಗೆ ತಂದಿದ್ದರಿಂದಾಗಿ ಆದಾಯ ತೆರಿಗೆ ವಿವರ ಸಲ್ಲಿಸುವುದು ಹೆಚ್ಚು ನಿಖರವಾಗಿದೆ ಎಂದು ವಿವರಿಸಿವೆ.
ಮರುಪಾವತಿ ಪ್ರಕ್ರಿಯೆಯನ್ನು ಸ್ವಯಂಚಾಲಿತ ಆಗಿಸಲಾಗಿದೆ, ತೆರಿಗೆ ಪಾವತಿದಾರರು ಸಮಸ್ಯೆಗಳನ್ನು ಆನ್‌ಲೈನ್ ಮೂಲಕವೇ ದಾಖಲಿಸಲು ವ್ಯವಸ್ಥೆ ಮಾಡಲಾಗಿದೆ. ಇದು ಕೂಡ ತೆರಿಗೆ ಪಾವತಿದಾರರಿಗೆ ಕೆಲಸವನ್ನು ಸುಗಮಗೊಳಿಸಿದೆ.
ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಒಟ್ಟು ಮೊತ್ತದಲ್ಲಿ ಮರುಪಾವತಿ ಆಗುವ ಮೊತ್ತವು 2013–14ರಿಂದ 2024–25ರವರೆಗಿನ ಅವಧಿಯಲ್ಲಿ ಶೇ 17.6ರಷ್ಟು ಹೆಚ್ಚಾಗಿದೆ.
ಮರುಪಾವತಿ ಮೊತ್ತದಲ್ಲಿನ ಈ ಹೆಚ್ಚಳವು, ಜನರು ತೆರಿಗೆ ವ್ಯವಸ್ಥೆಯಲ್ಲಿ ಸ್ವಯಂಪ್ರೇರಣೆಯಿಂದ ಭಾಗಿಯಾಗುತ್ತಿರುವುದನ್ನು ಹೇಳುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.