ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಇಳಿಕೆಯಾಗಿದ್ದು, ಗ್ರಾಹಕರು ನಿರಾಳರಾಗಿದ್ದಾರೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ಬೆಳ್ಳುಳ್ಳಿ ಚಿಲ್ಲರೆ ದರವು ಕೆ.ಜಿಗೆ ₹500 ದಾಟಿತ್ತು. ಇದರಿಂದ ಗ್ರಾಹಕರ ಜೇಬಿಗೆ ಹೊರೆಯಾಗಿತ್ತು. ಸದ್ಯ ಇಲ್ಲಿನ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ
ಸಗಟು ದರ ಕೆ.ಜಿಗೆ ₹50ರಿಂದ ₹100 ಇದ್ದರೆ, ಚಿಲ್ಲರೆ ದರವು ಕೆ.ಜಿಗೆ ₹120ರಿಂದ ₹140 ಇದೆ.
ದೇಶದ ಒಟ್ಟು ಬೆಳ್ಳುಳ್ಳಿ ಉತ್ಪಾದನೆ ಪೈಕಿಮಧ್ಯಪ್ರದೇಶದಲ್ಲಿ ಶೇ 70ರಷ್ಟು ಉತ್ಪಾದನೆಯಾಗುತ್ತದೆ. ಉಳಿದಂತೆ ರಾಜಸ್ಥಾನ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ರೈತರು ಹೆಚ್ಚಾಗಿ ಬೆಳೆಯುತ್ತಾರೆ.
ಕಳೆದ ವರ್ಷ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಳೆಯಿಂದಾಗಿ ಬೆಳೆ ಹಾನಿಗೀಡಾಗಿತ್ತು. ಈ ಬಾರಿ ಅಲ್ಲಿ ಉತ್ಪಾದನೆ ಹೆಚ್ಚಿದೆ. ಇದರಿಂದ ಕರ್ನಾಟಕದ ಮಾರುಕಟ್ಟೆಗೆ ಆವಕ ಹೆಚ್ಚಾಗುತ್ತಿದೆ. ಹಾಗಾಗಿ, ಬೆಳ್ಳುಳ್ಳಿ ದರ ಇಳಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಸದ್ಯ ಮಧ್ಯಪ್ರದೇಶದಲ್ಲಿ ಕೊಯ್ಲು ಶುರುವಾಗಿದೆ. ಅಲ್ಲಿಂದ ಬೆಂಗಳೂರಿನ ಯಶವಂತಪುರದ ಎಪಿಎಂಸಿಗೆ ಪ್ರತಿದಿನ 8 ಸಾವಿರದಿಂದ 10 ಸಾವಿರ ಚೀಲ (ಪ್ರತಿ ಚೀಲ 50 ಕೆ.ಜಿ) ಬೆಳ್ಳುಳ್ಳಿ ಆವಕ ಆಗುತ್ತದೆ. ಇಲ್ಲಿಂದ ಮಂಡ್ಯ, ಮೈಸೂರು, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ
ಜಿಲ್ಲೆಗೂ ಪೂರೈಕೆಯಾಗುತ್ತದೆ. ಅಲ್ಲದೆ, ನೆರೆಯ ತಮಿಳುನಾಡಿಗೂ ರವಾನೆಯಾಗುತ್ತದೆ.
‘ಕಳೆದ ವರ್ಷ ರಾಜಸ್ಥಾನದಲ್ಲಿ ಮಳೆಯಿಂದಾಗಿ ಹೆಚ್ಚು ಬೆಳೆ ನಷ್ಟವಾಗಿತ್ತು. ಈ ಬಾರಿ ಅಲ್ಲಿನ ಸರ್ಕಾರ ಅಂದಾಜಿಸಿದ್ದ ಕ್ಕಿಂತಲೂ ಮೂರು ಪಟ್ಟು ಹೆಚ್ಚು ಉತ್ಪಾದನೆಯಾಗಿದೆ. ಸದ್ಯ ಮಧ್ಯಪ್ರದೇಶದಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಂಗಳೂರಿನ ಮಾರುಕಟ್ಟೆಗೆ ಬೆಳ್ಳುಳ್ಳಿ ಆವಕವಾಗುತ್ತಿದೆ. ಇದರಿಂದ ಬೆಲೆ ಇಳಿಕೆಯಾಗಿದೆ’ ಎಂದು ಗುಜರಾತ್ ಟ್ರೇಡರ್ಸ್‌ನ ವರ್ತಕ ಜುಬೇರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೆಳ್ಳುಳ್ಳಿ ಬೆಳೆಯುವ ರಾಜ್ಯಗಳಲ್ಲಿ ಈ ಬಾರಿ ಉತ್ಪಾದನೆ ಹೆಚ್ಚಿದ್ದು, ಪೂರೈಕೆಯಲ್ಲಿ ವ್ಯತ್ಯಯ ಆಗುವುದಿಲ್ಲ. ಹಾಗಾಗಿ, ಸಗಟು ಮತ್ತು ಚಿಲ್ಲರೆ ಬೆಲೆಯು ಸ್ಥಿರವಾಗಿರಲಿದೆ’ ಎಂದು ಹೇಳಿದರು.1
ಬಾಂಗ್ಲಾಕ್ಕೆ ರಫ್ತು ಶುರು
ಭಾರತದಲ್ಲಿ ಬೆಳೆಯುವ ಬೆಳ್ಳುಳ್ಳಿಯು ಬಾಂಗ್ಲಾದೇಶ, ಮಲೇಷ್ಯಾ, ವಿಯೆಟ್ನಾಂ ಹಾಗೂ ಶ್ರೀಲಂಕಾಕ್ಕೂ ರಫ್ತಾಗುತ್ತದೆ. ಪ್ರಸ್ತುತ ಮಧ್ಯಪ್ರದೇಶದಿಂದ ಬಾಂಗ್ಲಾಕ್ಕೆ ರಫ್ತು ಆರಂಭಗೊಂಡಿದೆ. ಉತ್ಪಾದನೆ ಹೆಚ್ಚಿರುವುದ ರಿಂದ ಇದು ದೇಶೀಯ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.
ವಿಜಯಪುರ: ಕಳೆದ ಮುಂಗಾರು ಹಂಗಾಮಿನಡಿ ಕ್ವಿಂಟಲ್ ಬೆಳ್ಳುಳ್ಳಿಗೆ ₹35 ಸಾವಿರ ದರ ಇತ್ತು. ಹಾಗಾಗಿ, ಹಿಂಗಾರಿನಲ್ಲಿಯೂ ರೈತರು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರು. ಇದೀಗ ಕೊಯ್ದು ಆರಂಭವಾಗಿದೆ.
ಪ್ರಸ್ತುತ ಕ್ವಿಂಟಲ್‌ಗೆ 17 ಸಾವಿರದಿಂದ ₹8 ಸಾವಿರ ದರವಿದೆ. ಧಾರಣೆ ಇಳಿಕೆ ಆಗಿರುವುದರಿಂದ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.
ನಿಡಗುಂದಿಯ ಮುದ್ದೇಶ್ವರ ಅವರಣವು ಬೆಳ್ಳುಳ್ಳಿ ಮಾರಾಟ ಕೇಂದ್ರವಾಗಿದೆ. ಪ್ರತಿ ಬುಧವಾರ ಮತ್ತು ಶನಿವಾರ ಇಲ್ಲಿ ಬೃಹತ್ ಪ್ರಮಾಣದಲ್ಲಿ ಬೆಳ್ಳುಳ್ಳಿ ವಹಿವಾಟು ನಡೆಯುತ್ತದೆ. ಕನಿಷ್ಠ 500ರಿಂದ 1,000 ಕ್ವಿಂಟಲ್‌ವರೆಗೆ ಆವಕವಾಗುತ್ತದೆ.
ನೆರೆಯ ಬಾಗಲಕೋಟೆ, ಗದಗ, ಹುಬ್ಬಳ್ಳಿ, ದಾವಣಗೆರೆ ಸೇರಿ ವಿವಿಧೆಡೆಯಿಂದ ಸಗಟು ವ್ಯಾಪಾರಿಗಳು ಇಲ್ಲಿಗೆ ಬಂದು ಖರೀದಿಸುತ್ತಾರೆ. ಅಲ್ಲದೆ, ಜಿಲ್ಲೆಯ ರೈತರು ನೆರೆಯ ಜಿಲ್ಲೆಗಳ ಮಾರುಕಟ್ಟೆಗೆ ಒಯ್ದು ಮಾರುತ್ತಾರೆ.
‘2.5 ಎಕರೆಯಲ್ಲಿ ಸುಮಾರು 1.5 ಲಕ್ಷ ಖರ್ಚು ಮಾಡಿ ಜವಾರಿ ಬೆಳ್ಳುಳ್ಳಿ ಬಿತ್ತನೆ ಮಾಡಿದ್ದೆ, 40 ಕ್ವಿಂಟಲ್‌ಗೂ ಅಧಿಕ ಇಳುವರಿ ಬಂದಿತ್ತು. ಜನವರಿಯಲ್ಲಿ ಗದಗ, ಹಾವೇರಿ, ದಾವಣಗೆರೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿದ್ದೆ. ಆಗ ಕ್ವಿಂಟಲ್‌ಗೆ 14 ಸಾವಿರದಿಂದ 18 ಸಾವಿರದವರೆಗೆ ದರ ಸಿಕ್ಕಿತ್ತು. ಈಗ ಇಳಿಕೆಯಾಗಿದೆ' ಎನ್ನುತ್ತಾರೆ ಬಸವನ ಬಾಗೇವಾಡಿ ತಾಲ್ಲೂಕಿನ ಕಣಕಾಲ ಗ್ರಾಮದ ರೈತ ಶ್ರೀಶೈಲ ದಿನ್ನಿ,
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗುಡಿಗೇರಿ, ಕಳಸ, ಪಶುಪತಿಹಳ್ಳಿ, ಹರ್ಲಾಪುರ, ಸಂಕ್ಲಿಪುರ ಮತ್ತು ಸುಲ್ತಾನ್‌ಪುರ ಭಾಗದ 100 ಹೆಕ್ಟೇರ್‌ನಲ್ಲಿ ಬೆಳ್ಳುಳ್ಳಿ ಬೆಳೆಯಲಾಗಿದೆ.
‘ಗದಗ ಮಾರುಕಟ್ಟೆಯಲ್ಲಿ ಜವಾರಿ ಬೆಳ್ಳುಳ್ಳಿ ದರವು ಕ್ವಿಂಟಲ್‌ಗೆ ₹6 ಸಾವಿರದಿಂದ ₹7 ಸಾವಿರ ಇದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕ್ವಿಂಟಲ್‌ಗೆ ₹25 ಸಾವಿರ ಬೆಲೆ ಇತ್ತು. ಹೈಬ್ರಿಡ್ ಬೆಳ್ಳುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗುತ್ತಿದೆ. ಇದರಿಂದ ಜವಾರಿ ಬೆಳ್ಳುಳ್ಳಿ ದರ ಕಡಿಮೆಯಾಗಿದೆ’ ಎಂದು ಕುಂದಗೋಳ ತಾಲ್ಲೂಕಿನ ಗುಡಿಗೇರಿಯ ಬೆಳೆಗಾರ ಗಂಗಾಧರ ಗಿರಿಮಲ್ಲ ‘ಪ್ರಜಾವಾಣಿ’ಗೆ ತಿಳಿಸಿದರು.
ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಸಗಟು ದರ ಇಳಿದಿದೆ. ಜವಾರಿ ಬೆಳ್ಳುಳ್ಳಿ ದರ ಕೆ.ಜಿಗೆ ₹80ರಿಂದ ₹100 ಇದ್ದರೆ, ಹೈಬ್ರಿಡ್ ಬೆಳ್ಳುಳ್ಳಿ ದರ ಕೆ.ಜಿ ₹60ಕ್ಕೆ ಇಳಿದಿದೆ. ಎರಡು ತಿಂಗಳ ಹಿಂದೆ ಜವಾರಿ ಬೆಳ್ಳುಳ್ಳಿ ದರ ₹100ರಿಂದ ₹120 ಹಾಗೂ ಹೈಬ್ರಿಡ್ ಬೆಳ್ಳುಳ್ಳಿ ಬೆಲೆಯು ₹60ರಿಂದ ₹80 ಇತ್ತು.
ಹಾವೇರಿ ಮಾರುಕಟ್ಟೆಯಲ್ಲಿ ಹೈಬ್ರಿಡ್ ದಪ್ಪ ಬೆಳ್ಳುಳ್ಳಿ ದರ ಕ್ವಿಂಟಲ್‌ಗೆ ₹6000 ಇದೆ. ಜವಾರಿ ಬೆಳ್ಳುಳ್ಳಿಗೆ ₹7000 ದರ ಇದೆಶಿವಪ್ಪ ಬನ್ನಿಹಟ್ಟಿ ವರ್ತಕ
ಸ್ಥಳೀಯ ಮಾರುಕಟ್ಟೆಗೆ ಹೊರ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಆವಕವಾಗುತ್ತಿದೆ. ಇದರಿಂದ ರಾಜ್ಯದ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆಶ್ರೀಶೈಲ ದಿನ್ನಿ ರೈತ ಕಣಕಾಲ ಬಸವನ ಬಾಗೇವಾಡಿ ತಾಲ್ಲೂಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.