
ನವದೆಹಲಿ: ಭಾರತವು ಜನವರಿ ತಿಂಗಳಿನಲ್ಲಿ ಆಮದು ಮಾಡಿಕೊಂಡ ಕಚ್ಚಾ ತೈಲದಲ್ಲಿ ರಷ್ಯಾದ ಪಾಲು ಇಳಿಕೆ ಆಗಿದೆ ಎಂದು ಜಾಗತಿಕ ವ್ಯಾಪಾರ ವಿಶ್ಲೇಷಣಾ ಸಂಸ್ಥೆ ಕೆಪ್ಲರ್ ಸಿದ್ಧಪಡಿಸಿರುವ ವರದಿ ಹೇಳಿದೆ.
2025ರ ಮಧ್ಯಭಾಗದಲ್ಲಿ ರಷ್ಯಾದಿಂದ ಪ್ರತಿದಿನದ ಕಚ್ಚಾ ತೈಲ ಆಮದು 20 ಲಕ್ಷಕ್ಕೂ ಹೆಚ್ಚು ಬ್ಯಾರಲ್‌ನಷ್ಟಿತ್ತು. ಇದು ಡಿಸೆಂಬರ್ ತಿಂಗಳಿನಲ್ಲಿ 12.1 ಲಕ್ಷ ಬ್ಯಾರಲ್‌ನಷ್ಟಿದ್ದರೆ, ಜನವರಿ ತಿಂಗಳ ಮೊದಲ ಮೂರು ವಾರಗಳಲ್ಲಿ ಸುಮಾರು 11 ಲಕ್ಷ ಬ್ಯಾರಲ್‌ಗೆ ಇಳಿದಿದೆ ಎಂದು ತಿಳಿಸಿದೆ.
2025ರ ಡಿಸೆಂಬರ್‌ನಲ್ಲಿ ಇರಾಕ್ ಪ್ರತಿದಿನ ಅಂದಾಜು 9.04 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಭಾರತಕ್ಕೆ ಪೂರೈಕೆ ಮಾಡಿದೆ. ಜನವರಿಯಲ್ಲಿ ಸೌದಿ ಅರೇಬಿಯಾ 9.24 ಲಕ್ಷ ಬ್ಯಾರಲ್ ಪೂರೈಸಿದೆ. ಇದು ಡಿಸೆಂಬರ್‌ನಲ್ಲಿ 7.10 ಲಕ್ಷ ಬ್ಯಾರಲ್‌ನಷ್ಟಿದ್ದರೆ, ಕಳೆದ ಏಪ್ರಿಲ್‌ನಲ್ಲಿ 2.39 ಲಕ್ಷ ಬ್ಯಾರಲ್‌ನಷ್ಟಿತ್ತು.
2022ರಲ್ಲಿ ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಮಾಡುವುದರಲ್ಲಿ ಇರಾಕ್ ಅಗ್ರ ಸ್ಥಾನದಲ್ಲಿತ್ತು. ಆದರೆ, ಉಕ್ರೇನ್ ಯುದ್ಧ ಆರಂಭವಾದ ನಂತರದಲ್ಲಿ ರಷ್ಯಾ ಕಚ್ಚಾ ತೈಲಕ್ಕೆ ಹೆಚ್ಚಿನ ರಿಯಾಯಿತಿ ನೀಡಲು ಮುಂದಾಗಿದ್ದರಿಂದ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ಅದನ್ನು ಖರೀದಿಸಲು ಮುಂದಾದವು. ಇದರಿಂದ ರಷ್ಯಾದಿಂದ ಕಚ್ಚಾ ತೈಲ ಖರೀದಿ ಪ್ರಮಾಣವು ದೇಶದ ಒಟ್ಟು ಕಚ್ಚಾ ತೈಲ ಖರೀದಿಯ ಶೇ 40ಕ್ಕೆ ಹೆಚ್ಚಳವಾಯಿತು.
ಆದರೆ, ಈಗ ರಷ್ಯಾದ ತೈಲ ಪೂರೈಕೆದಾರರ ಮೇಲೆ ಅಮೆರಿಕ ಹೇರಿರುವ ನಿರ್ಬಂಧದ ಕಾರಣದಿಂದಾಗಿ ಖರೀದಿ ಪ್ರಮಾಣವು ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
‘ಕಚ್ಚಾ ತೈಲದ ವಿಚಾರವಾಗಿ ಕಡಿಮೆ ಅನಿಶ್ಚಿತತೆ ಹೊಂದಿರುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿರುವ ರಾಷ್ಟ್ರಗಳಿಂದ ಖರೀದಿಸಲು ಭಾರತವು ಮುಂದಾಗಿದೆ. ಪಶ್ಚಿಮ ಏಷ್ಯಾ ರಾಷ್ಟ್ರಗಳಿಂದ ಕಚ್ಚಾ ತೈಲ ಖರೀದಿ ಹೆಚ್ಚಾಗುತ್ತಿದೆ. ಆದರೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದು ನಿಂತಿಲ್ಲ’ ಎಂದು ಕೆಪ್ಲರ್‌ನ ಪ್ರಮುಖ ಸಂಶೋಧನಾ ವಿಶ್ಲೇಷಕ (ಸಂಸ್ಕರಣೆ ಮತ್ತು ಮಾಡೆಲಿಂಗ್) ಸುಮಿತ್ ರಿಟೋಲಿಯಾ ಹೇಳಿದ್ದಾರೆ.
ಭಾರತವು ಈ ವರ್ಷದ ಆರಂಭದಲ್ಲಿ ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುವುದನ್ನು ಮುಂದುವರಿಸುವ ಸಾಧ್ಯತೆಯಿದೆ. ಆದರೆ 2023-2025ರಲ್ಲಿ ಖರೀದಿ ಮಾಡಿದ್ದಕ್ಕಿಂತ ಕಡಿಮೆ ಮಟ್ಟದಲ್ಲಿ ಇರುತ್ತದೆ ಎಂದು ತಿಳಿಸಿದ್ದಾರೆ.
ಜನವರಿ ತಿಂಗಳಿನಲ್ಲಿ ರಷ್ಯಾದಿಂದ ಕಚ್ಚಾ ತೈಲ ಖರೀದಿ ದಿನವೊಂದಕ್ಕೆ ಅಂದಾಜು 12 ಲಕ್ಷ ಬ್ಯಾರಲ್‌ನಷ್ಟು ಇದೆ. ಇದು ಪ್ರಸಕ್ತ ವರ್ಷದ ಮಾರ್ಚ್ ತ್ರೈಮಾಸಿಕದ ವೇಳೆಗೆ ದಿನವೊಂದಕ್ಕೆ 13 ಲಕ್ಷದಿಂದ 15 ಲಕ್ಷ ಬ್ಯಾರಲ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.