ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ನವದೆಹಲಿ: ಏಪ್ರಿಲ್‌ನಿಂದ ಆರಂಭವಾಗಲಿರುವ ಹೊಸ ಆರ್ಥಿಕ ವರ್ಷದಲ್ಲಿ ಭಾರತದ ಅರ್ಥ ವ್ಯವಸ್ಥೆಯ ಬೆಳವಣಿಗೆ ದರವು ಶೇ 6.8ರಿಂದ ಶೇ 7.2ರ ಮಟ್ಟದಲ್ಲಿ ಇರಲಿದೆ ಎಂದು ಆರ್ಥಿಕ ಸಮೀಕ್ಷೆ ವರದಿ ಅಂದಾಜು ಮಾಡಿದೆ.
ವರದಿಯನ್ನು ಸಂಸತ್ತಿನಲ್ಲಿ ಗುರುವಾರ ಮಂಡಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ವ್ಯಾಪಾರ ವಹಿವಾಟುಗಳಿಗೆ ಹಲವು ಅಡ್ಡಿಗಳು ಎದುರಾಗಿದ್ದರೂ ಭಾರತವು ವಿಶ್ವದಲ್ಲಿ ಅತ್ಯಂತ ವೇಗದ ಬೆಳವಣಿಗೆ ಕಾಣುವ ಪ್ರಮುಖ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಳ್ಳಲಿದೆ ಎಂದು ವರದಿ ಹೇಳಿದೆ.
‘ಈಚಿನ ವರ್ಷಗಳಲ್ಲಿ ಜಾರಿಗೆ ತಂದ ಸುಧಾರಣೆಗಳ ಒಟ್ಟು ಪರಿಣಾಮವಾಗಿ ಮಧ್ಯಮಾವಧಿಯಲ್ಲಿ ಅರ್ಥ ವ್ಯವಸ್ಥೆಯ ಬೆಳವಣಿಗೆ ಸಾಧ್ಯತೆ ಶೇ 7ರ ಸನಿಹಕ್ಕೆ ಬಂದಿದೆ’ ಎಂದು ವರದಿಯು ವಿವರಿಸಿದೆ. ‘ಹೀಗಾಗಿ ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆಗಳು ಮನೆಮಾಡಿದ್ದರೂ, ಆರ್ಥಿಕ ಬೆಳವಣಿಗೆಯು ಸ್ಥಿರವಾಗಿ ಇರುವ ಅಂದಾಜು ಮಾಡಲಾಗಿದೆ’ ಎಂದು ಹೇಳಲಾಗಿದೆ.
ಅಮೆರಿಕ–ಭಾರತ ನಡುವಿನ ವ್ಯಾಪಾರ ಬಿಕ್ಕಟ್ಟು ಶಮನ ಆಗಿಲ್ಲದಿದ್ದರೂ ಜಿಡಿಪಿ ಬೆಳವಣಿಗೆ ವಿಚಾರದಲ್ಲಿ ಆಶಾದಾಯಕ ಚಿತ್ರಣವೊಂದನ್ನು ವರದಿಯು ನೀಡಿದೆ. ಭಾರತದ ಸರಕುಗಳ ಮೇಲೆ ಅಮೆರಿಕವು ಶೇ 50ರಷ್ಟು ಸುಂಕ ವಿಧಿಸಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿವಿಧ ಸುಧಾರಣಾ ಕ್ರಮಗಳ ಮೂಲಕ ಆರ್ಥಿಕತೆಗೆ ಚುರುಕು ನೀಡಲು ಮುಂದಾಗಿದೆ. ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿದೆ, ಜಿಎಸ್‌ಟಿ ದರ ಇಳಿಕೆ ಮಾಡಿದೆ, ಐರೋಪ್ಯ ಒಕ್ಕೂಟದ ಜೊತೆ ಮಹತ್ವದ ವ್ಯಾಪಾರ ಒಪ್ಪಂದ ಪೂರ್ಣಗೊಳಿಸಿದೆ.
ಅಮೆರಿಕವು ಭಾರತದ ಮೇಲೆ ವಿಧಿಸಿರುವ ಭಾರಿ ಪ್ರಮಾಣದ ಸುಂಕವು ಜಾರಿಯಲ್ಲಿ ಇದ್ದರೂ, ಮುಂದಿನ ಆರ್ಥಿಕ ವರ್ಷದಲ್ಲಿ ಭಾರತದ ಬೆಳವಣಿಗೆ ದರವು ಶೇ 6.2ರಷ್ಟು ಇರಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜು ಮಾಡಿದೆ.
ಅಮೆರಿಕದ ಜೊತೆ ವ್ಯಾಪಾರ ಒಪ್ಪಂದ ಸಂಬಂಧವಾಗಿ ನಡೆಯುತ್ತಿರುವ ಮಾತುಕತೆಯು ಈ ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರು ಸಿದ್ಧಪಡಿಸಿರುವ ಈ ವರದಿಯು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.