ADVERTISEMENT

‘ಒಪ್ಪಂದಗಳ ತಾಯಿ’ಗೆ ದಾರಿ ‘ಮುಕ್ತ’: ಭಾರತದ ಇತಿಹಾಸ ಕಂಡ ಅತಿದೊಡ್ಡ ಒಪ್ಪಂದ ಅಂತಿಮ

ಪಿಟಿಐ
Published 27 ಜನವರಿ 2026, 23:37 IST
Last Updated 27 ಜನವರಿ 2026, 23:37 IST
   

ನವದೆಹಲಿ: ‘ಎಲ್ಲ ಒಪ್ಪಂದಗಳ ತಾಯಿ’ ಎಂದು ಬಣ್ಣಿಸಲಾಗಿರುವ ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಮಾತುಕತೆ ಪೂರ್ಣಗೊಂಡಿದೆ ಎಂದು ಭಾರತ ಮತ್ತು ಇ.ಯು. ಮಂಗಳವಾರ ಘೋಷಿಸಿವೆ.

ಈ ಒಪ್ಪಂದವು ಜಾರಿಗೆ ಬಂದ ನಂತರದಲ್ಲಿ ಭಾರತದಿಂದ ಯುರೋಪಿಗೆ ರಫ್ತಾಗುವ ಶೇಕಡ 93ರಷ್ಟು ಉತ್ಪನ್ನಗಳು ಸುಂಕ ರಹಿತವಾಗಿ ಅಲ್ಲಿನ ಮಾರುಕಟ್ಟೆ ಪ್ರವೇಶಿಸಲಿವೆ. ಅಲ್ಲದೆ, ಯುರೋಪಿನ ಐಷಾರಾಮಿ ಕಾರುಗಳು ಹಾಗೂ ವೈನ್‌ಗಳ ಬೆಲೆಯು ಭಾರತದಲ್ಲಿ ಕಡಿಮೆ ಆಗಲಿದೆ.

ಎರಡು ದಶಕಗಳ ದೀರ್ಘ ಅವಧಿಯ ಮಾತುಕತೆ ನಂತರದಲ್ಲಿ ಎಫ್‌ಟಿಎ ಈ ಹಂತ ತಲುಪಿದೆ. ಇದು ಅಂದಾಜು 200 ಕೋಟಿ ಜನರ ಬೃಹತ್‌ ಮಾರುಕಟ್ಟೆಯನ್ನು ಸೃಷ್ಟಿಸಲಿದೆ. ಭಾರತವು ವಿಶ್ವದ ನಾಲ್ಕನೆಯ ಅತಿದೊಡ್ಡ ಅರ್ಥ ವ್ಯವಸ್ಥೆಯನ್ನು ಹೊಂದಿದೆ. ಇ.ಯು ದೇಶಗಳನ್ನು ಒಂದು ಗುಂಪಾಗಿ ಪರಿಗಣಿಸಿದಾಗ ಅದು ವಿಶ್ವದ ಎರಡನೆಯ ಅತಿದೊಡ್ಡ ಆರ್ಥಿಕತೆಯಾಗುತ್ತದೆ.

ADVERTISEMENT

ಭಾರತ ಮತ್ತು ಇ.ಯು ದೇಶಗಳ ಅರ್ಥ ವ್ಯವಸ್ಥೆಯು ಒಟ್ಟಾಗಿ ವಿಶ್ವದ ಜಿಡಿಪಿಯಲ್ಲಿ ಶೇಕಡ 25ರಷ್ಟು ಪಾಲು ಹೊಂದಿವೆ, ಜಾಗತಿಕ ವ್ಯಾಪಾರದಲ್ಲಿ ಮೂರನೆಯ ಒಂದರಷ್ಟು ಪಾಲು ಹೊಂದಿವೆ.

ಇ.ಯು ನಾಯಕರಾದ ಉರ್ಸುಲಾ ಫಾಂಡರ್‌ ಲೇಯನ್ ಮತ್ತು ಆ್ಯಂಟೊನಿಯೊ ಕೋಸ್ಟಾ ಅವರ ಜೊತೆ ಶೃಂಗಸಭೆಯಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಇತಿಹಾಸದಲ್ಲಿನ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದ ಕುರಿತ ಮಾತುಕತೆಯು ಪೂರ್ಣಗೊಂಡಿದೆ ಎಂಬುದನ್ನು ಪ್ರಕಟಿಸಿದರು.

ಒಪ್ಪಂದವು ಜಾರಿಗೆ ಬಂದ ನಂತರದಲ್ಲಿ ವಾಹನಗಳು ಹಾಗೂ ಉಕ್ಕು ಹೊರತುಪಡಿಸಿ, ಭಾರತದ ಬಹುತೇಕ ಎಲ್ಲ ಉತ್ಪನ್ನಗಳು (ಶೇ 93ರಷ್ಟಕ್ಕಿಂತ ಹೆಚ್ಚು) ಐರೋಪ್ಯ ಒಕ್ಕೂಟದ 27 ದೇಶಗಳ ಮಾರುಕಟ್ಟೆಯನ್ನು ಯಾವುದೇ ಸುಂಕ ಪಾವತಿಸದೆ ಪ್ರವೇಶಿಸಬಹುದು. ಭಾರತದ ಇನ್ನುಳಿದ ಸರಿಸುಮಾರು ಶೇ 6ರಷ್ಟು ಉತ್ಪನ್ನಗಳಿಗೆ (ಆಟೊಮೊಬೈಲ್‌ನಂತಹ ಉತ್ಪನ್ನಗಳಿಗೆ) ಸುಂಕ ಕಡಿತ ಅಥವಾ ಕೋಟಾ ಆಧಾರಿತ ಸುಂಕ ವಿನಾಯಿತಿಯ ಪ್ರಯೋಜನ ಸಿಗಲಿದೆ.

ಒಪ್ಪಂದಕ್ಕೆ ಈ ವರ್ಷದಲ್ಲಿ ಸಹಿ ಬೀಳಲಿದೆ. ಒಪ್ಪಂದವು ಮುಂದಿನ ವರ್ಷದ ಆರಂಭದಲ್ಲಿ ಜಾರಿಗೆ ಬರುವ ನಿರೀಕ್ಷೆ ಇದೆ. ಭಾರತದ ಸರಕುಗಳಿಗೆ ಇ.ಯು ದೇಶಗಳಲ್ಲಿ ಈಗ ಸರಾಸರಿ ಶೇ 3.8ರಷ್ಟು ಸುಂಕ ಇದೆ. ಇದು ಒಪ್ಪಂದ ಜಾರಿಯಾದ ನಂತರದಲ್ಲಿ ಶೇ 0.1ಕ್ಕೆ ಇಳಿಕೆ ಆಗುತ್ತದೆ.

ಇ.ಯು ದೇಶಗಳ ಶೇ 90ರಷ್ಟಕ್ಕಿಂತ ಹೆಚ್ಚಿನ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯನ್ನು 10 ವರ್ಷಗಳ ಅವಧಿಯಲ್ಲಿ ಸುಂಕ ರಹಿತವಾಗಿ ಪ್ರವೇಶಿಸಲು ಸಾಧ್ಯವಾಗಲಿದೆ. ಒಪ್ಪಂದ ಜಾರಿಗೆ ಬರುವ ಮೊದಲ ದಿನ ಶೇ 30ರಷ್ಟು ಉತ್ಪನ್ನಗಳಿಗೆ ಮಾತ್ರ ಭಾರತದ ಮಾರುಕಟ್ಟೆಗೆ ಸುಂಕರಹಿತ ಪ್ರವೇಶ ಸಿಗಲಿದೆ.

ಐರೋಪ್ಯ ಒಕ್ಕೂಟದ ದೇಶಗಳ ಯಂತ್ರೋಪಕರಣಗಳು, ಎಲೆಕ್ಟ್ರಿಕಲ್‌ ಉಪಕರಣಗಳು, ವಿಮಾನಗಳು, ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸಾ ಉಪಕರಣಗಳು, ಪ್ಲಾಸ್ಟಿಕ್, ರಾಸಾಯನಿಕಗಳು, ಉಕ್ಕು ಮತ್ತು ಕಬ್ಬಿಣ, ಔಷಧಗಳಿಗೆ ಭಾರತದ ಮಾರುಕಟ್ಟೆಯನ್ನು ಸುಂಕರಹಿತವಾಗಿ ಪ್ರವೇಶಿಸಲು ಆಗಲಿದೆ.

ಸೇವಾ ವಲಯಕ್ಕೆ ಸಂಬಂಧಿಸಿದ 144 ಉಪ ವಲಯಗಳನ್ನು ಇ.ಯು ಭಾರತದ ಪಾಲಿಗೆ ಮುಕ್ತವಾಗಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತವು 102 ಉಪ ವಲಯಗಳನ್ನು ಇ.ಯು ‍ಪಾಲಿಗೆ ಮುಕ್ತವಾಗಿಸುತ್ತಿದೆ.

ಇಂಗಾಲದ ತೆರಿಗೆ ವಿಚಾರವಾಗಿ ಇ.ಯು ಈ ಒಪ್ಪಂದದಲ್ಲಿ ಭಾರತಕ್ಕೆ ನಿರ್ದಿಷ್ಟವಾದ ಯಾವುದೇ ರಿಯಾಯಿತಿ ನೀಡುತ್ತಿಲ್ಲ. ಆದರೆ ಇ.ಯು ಮುಂದಿನ ದಿನಗಳಲ್ಲಿ ಯಾವುದೇ ದೇಶಕ್ಕೆ ಈ ತೆರಿಗೆ ವಿಚಾರದಲ್ಲಿ ಯಾವುದೇ ಬಗೆಯ ವಿನಾಯಿತಿ ನೀಡಿದಲ್ಲಿ, ಅದು ಭಾರತಕ್ಕೆ ಕೂಡ ಅನ್ವಯವಾಗುತ್ತದೆ ಎಂಬ ಭರವಸೆ ನೀಡಲಾಗಿದೆ.

ಯುರೋಪಿನ ಐಷಾರಾಮಿ ಕಾರುಗಳು ಅಗ್ಗ

ಒಪ್ಪಂದವು ಜಾರಿಗೆ ಬಂದ ನಂತರದಲ್ಲಿ ಯುರೋಪಿನ ಐಷಾರಾಮಿ ಕಾರುಗಳಿಗೆ ಭಾರತವು ಕೋಟಾ ಆಧಾರಿತ ಸುಂಕ ವಿನಾಯಿತಿ ಒದಗಿಸಲಿದೆ. ಇದರಿಂದಾಗಿ ಬಿಎಂಡಬ್ಲ್ಯು, ಮರ್ಸಿಡೀಸ್, ಲ್ಯಾಂಬೋರ್ಗಿನಿ, ಪೋಷೆ, ಔಡಿ ಕಂಪನಿಗಳ ಕಾರುಗಳ ಬೆಲೆಯು ಭಾರತದ ಮಾರುಕಟ್ಟೆಯಲ್ಲಿ ಕಡಿಮೆ ಆಗುವ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇ.ಯು ದೇಶಗಳು ಭಾರತದ ಆಟೊಮೊಬೈಲ್‌ಗಳ ಮೇಲಿನ ಸುಂಕವನ್ನು ಹಂತ ಹಂತವಾಗಿ ತಗ್ಗಿಸಲಿವೆ. ಭಾರತವು ಇ.ಯು ಒಕ್ಕೂಟದ ದೇಶಗಳ ಕಾರುಗಳ ಮೇಲಿನ ಸುಂಕವನ್ನು ವಾರ್ಷಿಕ 2.5 ಲಕ್ಷ ವಾಹನಗಳ ಕೋಟಾ ಮಿತಿಗೆ ಒಳಪಟ್ಟು ಶೇ 10ಕ್ಕೆ ಇಳಿಕೆ ಮಾಡಲಿದೆ.

ಭಾರತದ ಕಾರು ಮಾರುಕಟ್ಟೆಯಲ್ಲಿ ₹10 ಲಕ್ಷದಿಂದ ₹25 ಲಕ್ಷದವರೆಗಿನ ಕಾರುಗಳ ಮಾರಾಟವು ಹೆಚ್ಚಿದೆ. ಇ.ಯು ದೇಶಗಳು ಭಾರತದಲ್ಲಿ ಈ ಬೆಲೆಯ ಕಾರುಗಳ ಮಾರಾಟದಲ್ಲಿ ಹೆಚ್ಚಿನ ಆಸಕ್ತಿ ಹೊಂದಿಲ್ಲ. ಹೀಗಾಗಿ, ಇ.ಯು. ದೇಶಗಳಿಗೆ ಸೇರಿದ ಕಂಪನಿಗಳ ₹25 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರುಗಳನ್ನು ಇಲ್ಲಿಗೆ ರಫ್ತು ಮಾಡುವ ಬದಲು, ಅವುಗಳನ್ನು ಕಂಪನಿಗಳು ಭಾರತದಲ್ಲಿಯೇ ತಯಾರು ಮಾಡಬಹುದು ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಕೋಟಾ ಮೂಲಕ ನಿಗದಿ ಮಾಡಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಯುರೋಪಿನ ಕಂಪನಿಗಳ ಕಾರುಗಳಿಗೆ ಭಾರತದಲ್ಲಿ ಬೇಡಿಕೆ ಇದೆ ಎಂದಾದರೆ, ಆ ಮಾದರಿ ಕಾರುಗಳನ್ನು ಕಂಪನಿಗಳು ಭಾರತದಲ್ಲಿಯೇ ತಯಾರು ಮಾಡುವುದಕ್ಕೆ ಉತ್ತೇಜನ ನೀಡುವುದು ಸರ್ಕಾರದ ಉದ್ದೇಶ ಎಂದು ಅಧಿಕಾರಿ ಹೇಳಿದ್ದಾರೆ.

ಯುರೋಪಿನ ವಿದ್ಯುತ್ ಚಾಲಿತ ವಾಹನಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಕೋಟಾ ಆಧಾರಿತ ಸುಂಕ ಇಳಿಕೆಯ ಪ್ರಯೋಜನವು ಒಪ್ಪಂದ ಜಾರಿಗೆ ಬಂದ ಐದನೆಯ ವರ್ಷದಿಂದ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.