
ನವದೆಹಲಿ: ಭಾರತ ಮತ್ತು ಐರೋಪ್ಯ ಒಕ್ಕೂಟವು ‘ಐತಿಹಾಸಿಕ ವ್ಯಾಪಾರ ಒಪ್ಪಂದ’ದ ಹೊಸ್ತಿಲಿನಲ್ಲಿ ನಿಂತಿವೆ ಎಂದು ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ ಫಾಂಡರ್ ಲೇಯನ್ ಮಂಗಳವಾರ ಹೇಳಿದ್ದಾರೆ.
ಈ ಒಪ್ಪಂದವು ಜಾಗತಿಕ ಒಟ್ಟು ಆಂತರಿಕ ಉತ್ಪಾದನೆಯಲ್ಲಿ (ಜಿಡಿಪಿ) ಸರಿಸುಮಾರು ಶೇಕಡ 25ರಷ್ಟು ಪಾಲು ಹೊಂದಿದ, ಇನ್ನೂರು ಕೋಟಿ ಜನರು ಇರುವ ಮಾರುಕಟ್ಟೆಯನ್ನು ಸೃಷ್ಟಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಐರೋಪ್ಯ ಮಂಡಳಿಯ ಅಧ್ಯಕ್ಷ ಆ್ಯಂಟೊನಿಯೊ ಕೋಸ್ಟಾ ಮತ್ತು ಫಾಂಡರ್ ಲೇಯನ್ ಅವರು ಜನವರಿ 25ರಿಂದ 27ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅವರು ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಜನವರಿ 27ರಂದು ನಡೆಯಲಿರುವ ಭಾರತ–ಐರೋಪ್ಯ ಒಕ್ಕೂಟ ಶೃಂಗದ ಸಂದರ್ಭದಲ್ಲಿ, ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಗಳು ಪೂರ್ಣಗೊಂಡಿರುವುದನ್ನು ಎರಡೂ ಕಡೆಯ ಪ್ರಮುಖರು ಘೋಷಿಸುವ ನಿರೀಕ್ಷೆ ಇದೆ.
ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಫಾಂಡರ್ ಲೇಯನ್ ಅವರು, ‘ಇಂದು ಬೆಳವಣಿಗೆ ಕಾಣುತ್ತಿರುವ ಕೇಂದ್ರಗಳ ಜೊತೆ ಹಾಗೂ ಈ ಶತಮಾನದ ಆರ್ಥಿಕ ಶಕ್ತಿಕೇಂದ್ರಗಳ ಜೊತೆ ವ್ಯಾಪಾರ ವಹಿವಾಟು ನಡೆಸಲು ಯುರೋಪ್ ಬಯಸುತ್ತದೆ’ ಎಂದು ಹೇಳಿದ್ದಾರೆ.
‘ನಾನು ಭಾರತಕ್ಕೆ ತೆರಳಲಿದ್ದೇನೆ. ಅಲ್ಲಿ ಮಾಡಲು ಕೆಲಸಗಳು ಇನ್ನೂ ಇವೆ. ಆದರೆ ನಾವು ಐತಿಹಾಸಿಕ ವ್ಯಾಪಾರ ಒಪ್ಪಂದವೊಂದರ ಹೊಸ್ತಿಲಿನಲ್ಲಿ ನಿಂತಿದ್ದೇವೆ. ಇದನ್ನು ಕೆಲವರು ಎಲ್ಲ ಒಪ್ಪಂದಗಳ ತಾಯಿ ಎಂದು ಕರೆಯುತ್ತಿದ್ದಾರೆ...’ ಎಂದು ಅವರು ಹೇಳಿದ್ದಾರೆ.
ಐರೋಪ್ಯ ಒಕ್ಕೂಟವು ಭಾರತದ ಪಾಲಿನ ಅತಿದೊಡ್ಡ ವ್ಯಾಪಾರ ಪಾಲುದಾರ. ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಸರಕುಗಳ ದ್ವಿಪಕ್ಷೀಯ ವ್ಯಾಪಾರದ ಮೊತ್ತವು 2023–24ರಲ್ಲಿ 135 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು (ಸರಿಸುಮಾರು ₹12.28 ಲಕ್ಷ ಕೋಟಿ) ಆಗಿದೆ. ಮುಕ್ತ ವ್ಯಾಪಾರ ಒಪ್ಪಂದವು ವ್ಯಾಪಾರ ಸಂಬಂಧವನ್ನು ಗಣನೀಯವಾಗಿ ಗಟ್ಟಿಗೊಳಿಸುವ ನಿರೀಕ್ಷೆ ಇದೆ.
ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅಂತಿಮ ರೂಪ ನೀಡುವುದಷ್ಟೇ ಅಲ್ಲದೆ, ಭಾರತ ಮತ್ತು ಐರೋಪ್ಯ ಒಕ್ಕೂಟವು ರಕ್ಷಣಾ ಒಪ್ಪಂದಕ್ಕೆ ಸಂಬಂಧಿಸಿದ ಚೌಕಟ್ಟೊಂದನ್ನು ಅನಾವರಣಗೊಳಿಸುವ ನಿರೀಕ್ಷೆ ಇದೆ. ಅಂತರರಾಷ್ಟ್ರೀಯ ಮಟ್ಟದ ವ್ಯಾಪಾರಕ್ಕೆ ಸಂಬಂಧಿಸಿದಂತೆ ಅಮೆರಿಕ ತೆಗೆದುಕೊಳ್ಳುತ್ತಿರುವ ತೀರ್ಮಾನಗಳ ಸುತ್ತ ಕಳವಳಗಳು ಮೂಡಿರುವ ಸಂದರ್ಭದಲ್ಲಿ ಈ ಒಪ್ಪಂದವು ಅಂತಿಮಗೊಳ್ಳುತ್ತಿದೆ.
ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಯು 2007ರಲ್ಲಿ ಆರಂಭವಾಯಿತು. ಅದು 2013ರಲ್ಲಿ ನಿಂತಿತ್ತು. ನಂತರ 2022ರ ಜೂನ್‌ನಲ್ಲಿ ಅದನ್ನು ಮತ್ತೆ ಆರಂಭಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.