
ಪೀಯೂಷ್ ಗೋಯಲ್
ನವದೆಹಲಿ: ‘ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದ ಮುಂದಿನ ಐದು ವರ್ಷಗಳಲ್ಲಿ ಐರೋಪ್ಯ ಒಕ್ಕೂಟದ ದೇಶಗಳಿಗೆ ದೇಶದ ರಫ್ತು ದುಪ್ಪಟ್ಟಾಗುವ ನಿರೀಕ್ಷೆ ಇದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ಐರೋಪ್ಯ ಒಕ್ಕೂಟಕ್ಕೆ ಸರಕು ಮತ್ತು ಸೇವೆಗಳ ರಫ್ತಿನಲ್ಲಿ ಭಾರತವು ಈಗಾಗಲೇ ವ್ಯಾಪಾರ ಹೆಚ್ಚುವರಿಯನ್ನು ಹೊಂದಿದೆ ಎಂದ ಸಚಿವರು, ಈ ಒಪ್ಪಂದ ಅನುಷ್ಠಾನಗೊಂಡ ಮೊದಲ ದಿನದಿಂದಲೇ ದೇಶದ ಶೇ 99ರಷ್ಟು ಸರಕುಗಳು ಇ.ಯು ದೇಶಗಳ ಮಾರುಕಟ್ಟೆಯನ್ನು ಸುಂಕರಹಿತವಾಗಿ ಪ್ರವೇಶಿಸಲಿವೆ. ಇದರಿಂದ ದೇಶದ ರಫ್ತು ಐದು ವರ್ಷಗಳಲ್ಲಿ ದ್ವಿಗುಣಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಈ ದೇಶಗಳಿಗೆ 2024–25ರ ಆರ್ಥಿಕ ವರ್ಷದಲ್ಲಿ ದೇಶದ ಸರಕುಗಳ ರಫ್ತು ಹಣಕಾಸಿನ ಮೌಲ್ಯದಲ್ಲಿ ₹6.96 ಲಕ್ಷ ಕೋಟಿ ಮತ್ತು ಸೇವಾ ರಫ್ತು ಮೌಲ್ಯವು ₹4.21 ಲಕ್ಷ ಕೋಟಿಯಷ್ಟಾಗಿದೆ.
ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್‌ಟಿಎ) ಅತ್ಯಂತ ದೊಡ್ಡ ಒಪ್ಪಂದ ಎಂದು ಬಣ್ಣಿಸಲಾಗಿದೆ.
ಈ ಒಪ್ಪಂದದಿಂದ ಐರೋಪ್ಯ ಒಕ್ಕೂಟದ 27 ರಾಷ್ಟ್ರಗಳು ಮತ್ತು ಭಾರತ ಸೇರಿ 28 ದೇಶಗಳಿಗೆ ಪ್ರಯೋಜನವಾಗಲಿದೆ. ಈ ಒಪ್ಪಂದವು ಕಠಿಣವು ಅಲ್ಲ, ಸೌಮ್ಯವೂ ಅಲ್ಲ. ಈ ಒಪ್ಪಂದವು ಸಹಾನುಭೂತಿಯಿಂದ ಕೂಡಿದೆ ಎಂದು ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ದೇಶದ ಒಟ್ಟು ರಫ್ತು 2 ಟ್ರಿಲಿಯನ್ ಡಾಲರ್ (₹183 ಲಕ್ಷ ಕೋಟಿ) ಗುರಿ ಹೊಂದಲಾಗಿದೆ. ಇದು 2032ರ ವೇಳೆಗೆ ಸಾಧಿಸುವ ನಿರೀಕ್ಷೆ ಇದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.