
ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಜನವರಿವರೆಗಿನ ಅವಧಿಯಲ್ಲಿ ಕೇಂದ್ರ ಸರ್ಕಾರದ ವರಮಾನ ಮತ್ತು ವೆಚ್ಚದ ನಡುವಿನ ಅಂತರವಾದ ವಿತ್ತೀಯ ಕೊರತೆಯು ಇಡೀ ವರ್ಷದ ಗುರಿಯ ಶೇ 63ರಷ್ಟಾಗಿದೆ.
ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ಇದು ₹9.8 ಲಕ್ಷ ಕೋಟಿಯಾಗಿದೆ ಎಂದು ಶುಕ್ರವಾರ ಬಿಡುಗಡೆ ಆಗಿರುವ ಲೆಕ್ಕಪತ್ರಗಳ ಮಹಾನಿಯಂತ್ರಕರ (ಸಿಜಿಎ) ವರದಿ ತಿಳಿಸಿದೆ. 2024–25ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯು ಶೇ 74.5ರಷ್ಟಿತ್ತು.
2025–26ರ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 4.4ಕ್ಕೆ (ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ₹15.58 ಲಕ್ಷ ಕೋಟಿ) ತಗ್ಗಿಸಲು ಸರ್ಕಾರ ಬಜೆಟ್‌ನಲ್ಲಿ ಗುರಿ ನಿಗದಿ ಮಾಡಿದೆ.
ಏಪ್ರಿಲ್‌ನಿಂದ ಜನವರಿವರೆಗೆ ಸರ್ಕಾರವು ₹27.08 ಲಕ್ಷ ಕೋಟಿ ವರಮಾನ ಸ್ವೀಕರಿಸಿದೆ.
ಕೇಂದ್ರ ಸರ್ಕಾರ ಸ್ವೀಕರಿಸಿದ ಈ ಮೊತ್ತದ ಪೈಕಿ ₹20.94 ಲಕ್ಷ ಕೋಟಿ ತೆರಿಗೆ ವರಮಾನದಿಂದ ಸಂಗ್ರಹಿಸಿದೆ. ₹5.57 ಲಕ್ಷ ಕೋಟಿ ತೆರಿಗೆಯೇತರ ವರಮಾನ ಮತ್ತು ಇತರೆ ಮೂಲಗಳಿಂದ ₹57,129 ಕೋಟಿ ಸಂಗ್ರಹಿಸಿದೆ.
ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರಗಳಿಗೆ ₹11.39 ಲಕ್ಷ ಕೋಟಿಯನ್ನು ತೆರಿಗೆ ಪಾಲಾಗಿ ವರ್ಗಾಯಿಸಿದೆ. ಇದು ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ₹65,588 ಕೋಟಿಯಷ್ಟು ಅಧಿಕವಾಗಿದೆ ಎಂದು ತಿಳಿಸಿದೆ.
ಇದೇ ಅವಧಿಯಲ್ಲಿ ಸರ್ಕಾರದ ಒಟ್ಟು ವೆಚ್ಚವು ₹36.9 ಲಕ್ಷ ಕೋಟಿಯಾಗಿದೆ. ಈ ಪೈಕಿ ಬಡ್ಡಿಗೆ ₹9.88 ಲಕ್ಷ ಕೋಟಿ ಪಾವತಿಸಲಾಗಿದ್ದು, ₹3.54 ಲಕ್ಷ ಕೋಟಿಯನ್ನು ಪ್ರಮುಖ ಸಬ್ಸಿಡಿಗಳಿಗೆ ನೀಡಲಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.