ADVERTISEMENT

ದೇಶದ ಜಿಡಿಪಿ ಶೇ 6.3ಕ್ಕೆ ಇಳಿಕೆ ನಿರೀಕ್ಷೆ: ಎಸ್‌ಬಿಐ

ಪಿಟಿಐ
Published 22 ಆಗಸ್ಟ್ 2025, 13:34 IST
Last Updated 22 ಆಗಸ್ಟ್ 2025, 13:34 IST
ಎಸ್‌ಬಿಐ
ಎಸ್‌ಬಿಐ   

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6.3ಕ್ಕೆ ಇಳಿಯುವ ನಿರೀಕ್ಷೆಯಿದೆ ಎಂದು ಎಸ್‌ಬಿಐ ರಿಸರ್ಚ್‌ ತಿಳಿಸಿದೆ. ಇದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಂದಾಜಿಸಿರುವ ಶೇ 6.5ಕ್ಕಿಂತಲೂ ಕಡಿಮೆಯಾಗಿದೆ. 

ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿ ಶೇ 6.8ರಿಂದ ಶೇ 7ರಷ್ಟಿರಲಿದೆ. ಎರಡನೇ ತ್ರೈಮಾಸಿಕದಲ್ಲಿ ಶೇ 6.5, ಮೂರನೇ ತ್ರೈಮಾಸಿಕದಲ್ಲಿ ಶೇ 6.3 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ 6.1ರಷ್ಟಾಗಬಹುದು. ಖಾಸಗಿ ಬಂಡವಾಳ ವೆಚ್ಚ ಕಡಿಮೆ ಆಗಿರುವುದೇ ಪ್ರಗತಿ ಇಳಿಕೆಗೆ ಕಾರಣ ಎಂದು ಎಸ್‌ಬಿಐ ಹೇಳಿದೆ.

ಆದರೆ, ಆರ್‌ಬಿಐ ಮೊದಲ ತ್ರೈಮಾಸಿಕದಲ್ಲಿ ಶೇ 6.5, ಎರಡನೇ ತ್ರೈಮಾಸಿಕದಲ್ಲಿ ಶೇ 6.7, ಮೂರನೇ ತ್ರೈಮಾಸಿಕದಲ್ಲಿ ಶೇ 6.6 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ 6.3ರಷ್ಟಾಗಲಿದೆ ಎಂದು ಅಂದಾಜಿಸಿದೆ.

ADVERTISEMENT

ಕಳೆದ ಆರ್ಥಿಕ ವರ್ಷಕ್ಕಿಂತಲೂ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಂಡವಾಳ ವೆಚ್ಚ ಕಡಿಮೆ ಆಗಿದೆ. ಅಲ್ಲದೆ, ಅಮೆರಿಕದ ಸುಂಕ ಹೇರಿಕೆಯು ಬಂಡವಾಳ ವೆಚ್ಚದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದೆ. ಇದರಿಂದ ವೆಚ್ಚವು ಮತ್ತಷ್ಟು ಕಡಿಮೆ ಆಗಬಹುದು ಎಂದು ತಿಳಿಸಿದೆ.

ಜುಲೈ 25ರ ವೇಳೆಗೆ ಬ್ಯಾಂಕ್‌ಗಳ ಸಾಲ ನೀಡುವಿಕೆ ಪ್ರಮಾಣ ಶೇ 10ಕ್ಕೆ ಇಳಿದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ಶೇ 13.7ರಷ್ಟಿತ್ತು. 

ಅಮೆರಿಕದ ಸುಂಕ ಹೇರಿಕೆಯು ಪ್ರಮುಖವಾಗಿ ಜವಳಿ, ಹರಳು, ಚಿನ್ನಾಭರಣ, ಚರ್ಮದ ಉತ್ಪನ್ನಗಳು, ರಾಸಾಯನಿಕಗಳು, ಕೃಷಿ, ವಾಹನದ ಬಿಡಿಭಾಗಗಳು ಸೇರಿ ಇತರೆ ಸರಕುಗಳ ವರಮಾನ ಮತ್ತು ಗಳಿಕೆಯ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.