
ಮುಂಬೈ: ಮುಂದಿನ ಒಂದು ದಶಕದ ಅವಧಿಯಲ್ಲಿ ಭಾರತದ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ವಾರ್ಷಿಕ ಶೇ 8ರಿಂದ ಶೇ 10ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಆಸ್ತಿ ನಿರ್ವಹಣಾ ಕ್ಷೇತ್ರದ ಜಾಗತಿಕ ದೈತ್ಯ ‘ಬ್ಲ್ಯಾಕ್‌ರಾಕ್’ ಕಂಪನಿಯ ಸಿಇಒ ಲ್ಯಾರಿ ಫಿಂಕ್ ಭವಿಷ್ಯ ನುಡಿದರು.
ಅಲ್ಲದೆ, ಮುಂದಿನ ಕೆಲವು ವರ್ಷಗಳು ‘ಭಾರತದ ಯುಗ’ವಾಗಲಿದೆ ಎಂದೂ ಅವರು ಹೇಳಿದರು. ಬ್ಲ್ಯಾಕ್‌ರಾಕ್ ಕಂಪನಿಯು ಭಾರತದ ಜಿಯೊ ಫೈನಾನ್ಶಿಯಲ್ ಸರ್ವಿಸಸ್ ಜೊತೆ ಆಸ್ತಿ ನಿರ್ವಹಣೆ ಮತ್ತು ಸಂಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಪಾಲುದಾರಿಕೆ ಹೊಂದಿದೆ.
ಜನರು ತಮ್ಮಲ್ಲಿನ ಹಣವನ್ನು ಬಂಡವಾಳ ಮಾರುಕಟ್ಟೆಗಳಲ್ಲಿ ತೊಡಗಿಸಬೇಕು, ಹಣವನ್ನು ಅವರು ಬ್ಯಾಂಕ್‌ಗಳಲ್ಲಿ ಠೇವಣಿ ರೂಪದಲ್ಲಿ ಇರಿಸಬಾರದು ಎಂದು ಫಿಂಕ್ ಕರೆ ನೀಡಿದರು.
ಅಮೆರಿಕದ ಉದಾಹರಣೆಯನ್ನು ನೀಡಿದ ಅವರು, ಬಂಡವಾಳ ಮಾರುಕಟ್ಟೆಗಳಲ್ಲಿ ಹಣ ಹೂಡಿಕೆ ಮಾಡಿದವರು ಬ್ಯಾಂಕ್‌ಗಳಲ್ಲಿ ಹಣ ಇರಿಸಿದ್ದವರಿಗಿಂತ ಹೆಚ್ಚು ಲಾಭ ಮಾಡಿಕೊಂಡರು ಎಂದು ಹೇಳಿದರು. ‘ಜಿಯೊ ಬ್ಲ್ಯಾಕ್‌ರಾಕ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಜೊತೆ ಸಂವಾದ ನಡೆಸಿದರು. ವಾಣಿಜ್ಯ ವಹಿವಾಟು, ಬೇಡಿಕೆ ಮತ್ತು ಮಾಹಿತಿ ಕ್ಷೇತ್ರದಲ್ಲಿ ಬದಲಾವಣೆ ತರಲು ಭಾರತವು ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡ ಬಗೆಯ ಸ್ಫೂರ್ತಿದಾಯಕ ಎಂದರು.
ಎರಡು ಅಂಕಿಗಳ ಬೆಳವಣಿಗೆ ದರವನ್ನು ದೇಶದಲ್ಲಿ ಕಾಯ್ದುಕೊಳ್ಳಲು ಸಾಧ್ಯವಿದೆ ಎಂದು ಅಂಬಾನಿ ಪ್ರತಿಪಾದಿಸಿದರು.
‘ಭಾರತವು ಹಿಂದಿನಿಂದಲೂ ಹಣ ಉಳಿತಾಯ ಮಾಡುವವರ ದೇಶ. ಆದರೆ ಭಾರತೀಯರು ಹಿಂದಿನ ವರ್ಷದಲ್ಲಿ 60 ಬಿಲಿಯನ್ ಡಾಲರ್‌ಗಿಂತ (₹5.42 ಲಕ್ಷ ಕೋಟಿ) ಹೆಚ್ಚಿನ ಮೊತ್ತವನ್ನು ಚಿನ್ನದ ಮೇಲೆ, 15 ಬಿಲಿಯನ್ ಡಾಲರ್ (₹1.35 ಲಕ್ಷ ಕೋಟಿ) ಮೊತ್ತವನ್ನು ಬೆಳ್ಳಿಯ ಮೇಲೆ ಹೂಡಿಕೆ ಮಾಡಿದ್ದಾರೆ. ಹಣ ಉಳಿತಾಯ ಮಾಡುವ ಮನಃಸ್ಥಿತಿ ಇರುವವರಿಗೆ ಬಂಡವಾಳ ಮಾರುಕಟ್ಟೆಗಳ ಬಗ್ಗೆ ಅರಿವು ಮೂಡಿಸಿ, ಅವರ ಉಳಿತಾಯದ ಹಣವು ಅಲ್ಲಿಗೆ ಬರುವಂತೆ ಮಾಡುವ ಅವಕಾಶ ಜಿಯೊ ಬ್ಲ್ಯಾಕ್‌ರಾಕ್‌ಗೆ ಇದೆ’ ಎಂದು ಅಂಬಾನಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಯೊ ಫೈನಾನ್ಶಿಯಲ್ ಸರ್ವಿಸಸ್‌ನ ಅಧ್ಯಕ್ಷ ಕೆ.ವಿ. ಕಾಮತ್, ‘ಮ್ಯೂಚುವಲ್ ಫಂಡ್‌ಗಳ ಮೂಲಕ ಹೂಡಿಕೆ ಮಾಡಿರುವ ಮೊತ್ತವು ಈಗ ₹80 ಲಕ್ಷ ಕೋಟಿ ಇರುವುದು ಮುಂದಿನ ಐದು ವರ್ಷಗಳಲ್ಲಿ ದುಪ್ಪಟ್ಟಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.