ಅರಿಸಿನ
ಹೈದರಾಬಾದ್: 2030ರ ವೇಳೆಗೆ 1 ಬಿಲಿಯನ್ ಡಾಲರ್ (ಅಂದಾಜು ₹8,548 ಕೋಟಿ) ಮೌಲ್ಯದ ಅರಿಸಿನ ರಫ್ತು ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅರಿಸಿನ ಮಂಡಳಿಯ ರಾಷ್ಟ್ರೀಯ ಕೇಂದ್ರ ಕಚೇರಿಯನ್ನು ಇಲ್ಲಿನ ನಿಜಾಮಾಬಾದ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಅರಿಸಿನ ಮಂಡಳಿಯು ಈ ಪದಾರ್ಥದ ಪ್ಯಾಕಿಂಗ್, ಬ್ರ್ಯಾಂಡ್ ತಂದುಕೊಡುವ ಕೆಲಸ, ಮಾರಾಟ ಮಾಡುವ ಮತ್ತು ರಫ್ತು ಮಾಡುವ ಕಡೆ ಗಮನ ನೀಡಲಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಅರಿಸಿನ ಬೆಳೆಯುವ ರೈತರಿಗೆ ಆಕರ್ಷಕ ಬೆಲೆ ಲಭ್ಯವಾಗುವಂತೆ ಮಾಡುವ ಬಗ್ಗೆ, ಅರಿಸಿನದ ಬಗ್ಗೆ ಸಂಶೋಧನೆ ನಡೆಸುವ ಬಗ್ಗೆಯೂ ಗಮನ ಹರಿಸಲಿದೆ ಎಂದು ಶಾ ಅವರು ಹೇಳಿದ್ದಾರೆ.
‘1 ಬಿಲಿಯನ್ ಡಾಲರ್ ಮೌಲ್ಯದ ಅರಿಸಿನವನ್ನು 2030ರ ವೇಳೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುವ ಗುರಿಯನ್ನು ಕೇಂದ್ರ ಹೊಂದಿದೆ ಎಂಬುದನ್ನು ಕೇಳಿ ನಿಮಗೆ ಆಶ್ಚರ್ಯ ಆಗಬಹುದು. ಆದರೆ ಈ ಗುರಿಯನ್ನು ತಲುಪಲು ಬೇಕಿರುವ ಪೂರ್ಣ ಸಿದ್ಧತೆಗಳನ್ನು ಕೇಂದ್ರವು ಮಾಡಿಕೊಂಡಿದೆ. ರಚನೆ ಆಗಲಿರುವ ಅರಿಸಿನ ಮಂಡಳಿಯು, ರೈತರಿಗೆ ಗರಿಷ್ಠ ಬೆಲೆ ಸಿಗುವಂತೆ ಖಾತರಿಪಡಿಸಲು ಕೆಲಸ ಮಾಡಲಿದೆ’ ಎಂದು ಅವರು ಹೇಳಿದ್ದಾರೆ.
ತೆಲಂಗಾಣದಲ್ಲಿ ಅರಿಸಿನ ಮಂಡಳಿ ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದರು. ನಂತರ ಅದಕ್ಕೆ ಸಂಬಂಧಿಸಿದ ಆದೇಶ ಹೊರಡಿಸಲಾಯಿತು ಎಂದು ನೆನಪಿಸಿದ್ದಾರೆ.
ಅರಿಸಿನ ಮಂಡಳಿ ಸ್ಥಾಪನೆ ಆಗಬೇಕು ಎಂಬುದು ನಿಜಾಮಾಬಾದ್‌ನ ಅರಿಸಿನ ಬೆಳೆಗಾರರ ಪ್ರಮುಖ ಬೇಡಿಕೆಗಳಲ್ಲಿ ಒಂದು. ಇದು ಚುನಾವಣೆಯ ಸಂದರ್ಭದಲ್ಲಿ ಪ್ರಮುಖ ವಿಷಯವಾಗಿ ಪ್ರಸ್ತಾಪ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.