ADVERTISEMENT

140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ 191 ಮಂದಿ ಶತಕೋಟಿ ಒಡೆಯರು: ವರದಿ

ಪಿಟಿಐ
Published 5 ಮಾರ್ಚ್ 2025, 11:07 IST
Last Updated 5 ಮಾರ್ಚ್ 2025, 11:07 IST
   

ನವದೆಹಲಿ: 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ 191 ಮಂದಿ ಶತಕೋಟಿ ಒಡೆಯರು ಇದ್ದಾರೆ. 2024ರಲ್ಲಿ ಈ ಗುಂಪಿಗೆ 26 ಶತಕೋಟಿ ಒಡೆಯರು ಹೊಸದಾಗಿ ಸೇರಿದ್ದಾರೆ ಎಂದು ಆಸ್ತಿ ಸಲಹಾ ಸಂಸ್ಥೆ ನೈಟ್‌ ಫ್ರ್ಯಾಂಕ್‌ ಇಂಡಿಯಾ ವರದಿ ಮಾಡಿದೆ.

ನೈಟ್‌ ಫ್ರ್ಯಾಂಕ್‌ ಇಂಡಿಯಾ ಇಂದು (ಬುಧವಾರ) ‘ದಿ ವೆಲ್ತ್ ರಿಪೋರ್ಟ್ 2025’ ವರದಿಯನ್ನು ಬಿಡುಗಡೆ ಮಾಡಿದ್ದು, ‘2019ರಲ್ಲಿ ಭಾರತದಲ್ಲಿ ಕೇವಲ ಏಳು ಶತಕೋಟಿ ಒಡೆಯರಿದ್ದರು. ಈ ಸಂಖ್ಯೆ ಬೆಳೆಯುತ್ತಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ದೇಶದಲ್ಲಿ ₹87 ಕೋಟಿಗಿಂತ ಹೆಚ್ಚು ಆಸ್ತಿ ಹೊಂದಿರುವ ಸಿರಿವಂತರ ಸಂಖ್ಯೆ ಶೇ 6ರಷ್ಟು ಹೆಚ್ಚಳವಾಗಿದೆ. 2024ರಲ್ಲಿ ದೇಶದ ಅತಿ ಸಿರಿವಂತರ ಸಂಖ್ಯೆ 85,698ಕ್ಕೆ ತಲುಪಿದೆ ಎಂದು ಅಂದಾಜಿಸಿದೆ.

ADVERTISEMENT

ದೇಶದಲ್ಲಿ ಸಿರಿವಂತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, 2028ರ ವೇಳೆಗೆ ದೇಶದ ಅತಿ ಸಿರಿವಂತರ ಸಂಖ್ಯೆ 93,753ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದೂ ನೈಟ್‌ ಫ್ರ್ಯಾಂಕ್ ವರದಿಯಲ್ಲಿ ಉಲ್ಲೇಖಿಸಿದೆ.

ಅಮೆರಿಕದಲ್ಲಿ ಬಿಲಿಯನೇರ್‌ಗಳ ಒಟ್ಟು ಸಂಪತ್ತು ₹496 ಲಕ್ಷ ಕೋಟಿಯಷ್ಟಿದ್ದರೆ, ಚೀನಾದಲ್ಲಿ ಬಿಲಿಯನೇರ್‌ಗಳ ಒಟ್ಟು ಸಂಪತ್ತು ₹116 ಲಕ್ಷ ಕೋಟಿಯಷ್ಟಿದೆ. ಭಾರತದಲ್ಲಿ ಬಿಲಿಯನೇರ್‌ಗಳ ಒಟ್ಟು ಸಂಪತ್ತು ₹82.70 ಲಕ್ಷ ಕೋಟಿಯಷ್ಟಿದೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ಜಾಗತಿಕ ಮಾರುಕಟ್ಟೆಗಾಗಿ ತಯಾರಿಕೆ, ಮೂಲಸೌಕರ್ಯ ಅಭಿವೃದ್ಧಿ, ತಂತ್ರಜ್ಞಾನಕ್ಕೆ ಸಂಬಂಧಿಸಿದ ನವೋದ್ಯಮಗಳು ಇತ್ಯಾದಿ ವಲಯಗಳಿಂದ ಹೊಸ ಅವಕಾಶಗಳು ಲಭ್ಯವಾಗುತ್ತಿವೆ. ಇದು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿದ್ದು, ದೇಶದಲ್ಲಿ ಸಂಪತ್ತು ಸೃಷ್ಟಿಗೆ ನೆರವಾಗಲಿದೆ. ಆ ಮೂಲಕ ದೇಶದಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ನೈಟ್‌ ಫ್ರ್ಯಾಂಕ್‌ ಇಂಡಿಯಾದ ಅಧ್ಯಕ್ಷ ಶಿಶಿರ್‌ ಬೈಜಲ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.