
ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆ ಅಕ್ಟೋಬರ್ ತಿಂಗಳಿನಲ್ಲಿ ಏರಿಕೆಯಾಗಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ಸಮೀಕ್ಷಾ ವರದಿಯು ಸೋಮವಾರ ತಿಳಿಸಿದೆ.
ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯು ನಿರ್ವಹಿಸುವ ‘ಎಚ್‌ಎಸ್‌ಬಿಸಿ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕ’ವು ಸೆಪ್ಟೆಂಬರ್ ತಿಂಗಳಲ್ಲಿ 57.7 ದಾಖಲಾಗಿತ್ತು. ಇದು ಅಕ್ಟೋಬರ್‌ನಲ್ಲಿ 59.2ಕ್ಕೆ ಏರಿಕೆಯಾಗಿದೆ.
ಪಿಎಂಐ ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಬೆಳವಣಿಗೆ ಎಂದು ಗುರುತಿಸಲಾಗುತ್ತದೆ.
ಜಿಎಸ್‌ಟಿ ಇಳಿಕೆಯಿಂದ ಖರೀದಿ ಹೆಚ್ಚಳವಾಯಿತು. ದೇಶೀಯ ಮಾರುಕಟ್ಟೆಯಲ್ಲಿ ಸರಕುಗಳಿಗೆ ಹೆಚ್ಚಿದ ಬೇಡಿಕೆ ಮತ್ತು ಹೊಸ ರಫ್ತು ಕಾರ್ಯಾದೇಶದಿಂದ ಸೂಚ್ಯಂಕವು ಏರಿಕೆ ಕಂಡಿದೆ ಎಂದು ತಿಳಿಸಿದೆ. ಜೊತೆಗೆ ತಂತ್ರಜ್ಞಾನ ಕಂಪನಿಗಳು ಹೂಡಿಕೆ ಪ್ರಮಾಣವನ್ನು ಹೆಚ್ಚಿಸಿದ್ದು ಸಹ ಸೂಚ್ಯಂಕಗಳ ಏರಿಕೆಗೆ ಕಾರಣವಾಗಿದೆ ಎಂದು ತಿಳಿಸಿದೆ.
ಆದರೆ, ಇದೇ ಅವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವು ಮಂದಗೊಂಡಿದೆ ಎಂದು ಹೇಳಿದೆ.
‘ಅಕ್ಟೋಬರ್‌ನಲ್ಲಿ ತಯಾರಿಕಾ ವಲಯದ ಉತ್ಪಾದನೆ ಏರಿಕೆಯಾಗಿದೆ. ಹೊಸ ಕಾರ್ಯಾದೇಶ ಮತ್ತು ಉದ್ಯೋಗ ಸೃಷ್ಟಿ ಹೆಚ್ಚಳವಾಗಿದೆ’ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞೆ ಪ್ರಾಂಜುಲ್ ಭಂಡಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.