ನವದೆಹಲಿ: 2047ಕ್ಕೆ ವಿಕಸಿತ ಭಾರತದ ನಿರ್ಮಾಣ ಆಗಬೇಕು ಎಂದು ಕೇಂದ್ರ ಸರ್ಕಾರ ಹೊಂದಿರುವ ಗುರಿ ತಲುಪಬೇಕು ಎಂದಾದರೆ ದೇಶದ ಜಿಡಿಪಿ ಬೆಳವಣಿಗೆ ದರವು (ಹಣದದುಬ್ಬರ ಪ್ರಮಾಣವನ್ನು ಪರಿಗಣನೆಗೆ ತೆಗೆದುಕೊಳ್ಳದೆ) ವಾರ್ಷಿಕ ಶೇಕಡ 10ರಷ್ಟು ಇರಬೇಕು ಎಂದು ಭಾರತೀಯ ಕೈಗಾರಿಕಾ ಮಹಾಸಂಘದ (ಸಿಐಐ) ಅಧ್ಯಕ್ಷ ರಾಜೀವ್ ಮೆಮಾನಿ ಹೇಳಿದ್ದಾರೆ.
ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮೆಮಾನಿ ಅವರು, ‘ಭಾರತ ಮತ್ತು ಅಮೆರಿಕದ ನಡುವಿನ ವಾಣಿಜ್ಯ ಒಪ್ಪಂದವು ಅನಿಶ್ಚಿತತೆಯ ಕಾರ್ಮೋಡವನ್ನು ನಿವಾರಿಸಲಿದೆ, ಭಾರತದ ಕಂಪನಿಗಳಿಗೆ ದೊಡ್ಡ ಮಾರುಕಟ್ಟೆ ಲಭ್ಯವಾಗುತ್ತದೆ’ ಎಂದು ಹೇಳಿದ್ದಾರೆ.
ಎರಡೂ ದೇಶಗಳ ನಡುವಿನ ವಾಣಿಜ್ಯ ಒಪ್ಪಂದವು ತಂತ್ರಜ್ಞಾನ ವರ್ಗಾವಣೆಗೆ, ಇನ್ನಷ್ಟು ಹೆಚ್ಚಿನ ಸಂಖ್ಯೆಯ ಜಂಟಿ ಪಾಲುದಾರಿಕೆ ಉದ್ದಿಮೆಗಳಿಗೆ ಕೂಡ ದಾರಿ ಮಾಡಿಕೊಡಲಿದೆ ಎಂದು ಅವರು ಹೇಳಿದ್ದಾರೆ.
‘ಅರ್ಥ ವ್ಯವಸ್ಥೆಯ ದೃಷ್ಟಿಯಿಂದ ನಮ್ಮ ಸ್ಥಿತಿ ಬಹಳ ಉತ್ತಮವಾಗಿದೆ, ಸ್ಥಿರವಾಗಿದೆ. ನಮ್ಮ ಬಂಡವಾಳ ಮಾರುಕಟ್ಟೆ, ಕೇಂದ್ರೀಯ ಬ್ಯಾಂಕ್, ಬ್ಯಾಂಕುಗಳು ಒಳ್ಳೆಯ ಸ್ಥಿತಿಯಲ್ಲಿ ಇವೆ. ಕಾರ್ಪೊರೇಟ್ ಕಂಪನಿಗಳ ಹಣಕಾಸಿನ ಸ್ಥಿತಿ ಕೂಡ ಚೆನ್ನಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.