
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೊಫರ್ ಲಕ್ಸನ್
ನವದೆಹಲಿ: ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಗಳು ಪೂರ್ಣಗೊಂಡಿವೆ ಎಂದು ಭಾರತ ಮತ್ತು ನ್ಯೂಜಿಲೆಂಡ್ ಸೋಮವಾರ ಘೋಷಿಸಿವೆ.
ಈ ಒಪ್ಪಂದದ ಪರಿಣಾಮವಾಗಿ ಎರಡೂ ದೇಶಗಳ ನಡುವಿನ ವ್ಯಾಪಾರದ ಮೊತ್ತವು (ಸರಕು ಮತ್ತು ಸೇವೆಗಳನ್ನು ಪರಿಗಣಿಸಿ) ಐದು ವರ್ಷಗಳಲ್ಲಿ 5 ಬಿಲಿಯನ್ ಅಮೆರಿಕನ್ ಡಾಲರ್‌ಗೆ (ಸುಮಾರು ₹44.18 ಸಾವಿರ ಕೋಟಿ) ಹೆಚ್ಚಲಿದೆ ಎಂದು ಅಂದಾಜು ಮಾಡಲಾಗಿದೆ.
ಕಿವಿ ಹಣ್ಣು, ವೈನ್, ಕೆಲವು ಬಗೆಯ ಸಮುದ್ರ ಆಹಾರ ಉತ್ಪನ್ನಗಳು, ಚೆರ್‍ರಿ, ಬೆಣ್ಣೆಹಣ್ಣು, ಪರ್ಸಿಮ್ಮಾನ್ ಹಣ್ಣುಗಳನ್ನು ಭಾರತದ ಮಾರುಕಟ್ಟೆಗೆ ರವಾನಿಸುವಾಗ ನ್ಯೂಜಿಲೆಂಡ್‌ಗೆ ಸುಂಕ ವಿನಾಯಿತಿ ಸಿಗಲಿದೆ.
ದೇಶದ ರೈತರು ಹಾಗೂ ಎಂಎಸ್‌ಎಂಇ ವಲಯವನ್ನು ರಕ್ಷಿಸುವ ಉದ್ದೇಶದಿಂದ ಹಾಲಿನ ಉತ್ಪನ್ನಗಳ ವಲಯದ ಯಾವುದೇ ಉತ್ಪನ್ನಕ್ಕೆ ಸುಂಕ ರಹಿತ ಪ್ರವೇಶ ನೀಡಲು ಭಾರತ ಒಪ್ಪಿಲ್ಲ. ಹಾಲಿನ ಉತ್ಪನ್ನಗಳ ವಲಯವು ಭಾರತದಲ್ಲಿ ರಾಜಕೀಯವಾಗಿ ಸೂಕ್ಷ್ಮ ಕೂಡ ಹೌದು.
ಪ್ರತಿ ವರ್ಷ ಭಾರತದ ಐದು ಸಾವಿರ ಕುಶಲ ನೌಕರರಿಗೆ ನ್ಯೂಜಿಲೆಂಡ್ ತಾತ್ಕಾಲಿಕ ನೌಕರಿ ವೀಸಾ ನೀಡುತ್ತದೆ. ಇದಕ್ಕೆ ಮೂರು ವರ್ಷಗಳ ಮಾನ್ಯತೆ ಇರುತ್ತದೆ. ಆಯುಷ್ ವೈದ್ಯರು, ಯೋಗ ತರಬೇತುದಾರರು, ಬಾಣಸಿಗರು, ಸಂಗೀತ ಶಿಕ್ಷಕರು, ಐ.ಟಿ, ಎಂಜಿನಿಯರಿಂಗ್, ಆರೋಗ್ಯಸೇವೆ, ಶಿಕ್ಷಣ, ಕಟ್ಟಡ ನಿರ್ಮಾಣ ವಲಯದ ನೌಕರರಿಗೆ ಇದು ಪ್ರಯೋಜನ ನೀಡಲಿದೆ.
ಒಪ್ಪಂದಕ್ಕೆ ಇನ್ನು ಏಳರಿಂದ ಎಂಟು ತಿಂಗಳಲ್ಲಿ ಸಹಿ ಬೀಳುವ ನಿರೀಕ್ಷೆ ಇದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೊಫರ್ ಲಕ್ಸನ್ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಇದಾದ ನಂತರದಲ್ಲಿ ಎಫ್‌ಟಿಎ ಕುರಿತ ಘೋಷಣೆಯನ್ನು ಮಾಡಲಾಯಿತು.
ನ್ಯೂಜಿಲೆಂಡ್ ಜೊತೆಗಿನ ಎಫ್‌ಟಿಎ ದೇಶಿ ತಯಾರಿಕಾ ವಲಯಕ್ಕೆ ಉತ್ತೇಜನ ನೀಡಲಿದೆ, ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.