ADVERTISEMENT

ರಷ್ಯಾ ತೈಲಕ್ಕೆ ರೂಪಾಯಿಯಲ್ಲಿ ಪಾವತಿ ಇಲ್ಲ: ಕೇಂದ್ರ

ಪಿಟಿಐ
Published 28 ಮಾರ್ಚ್ 2022, 13:41 IST
Last Updated 28 ಮಾರ್ಚ್ 2022, 13:41 IST
   

ನವದೆಹಲಿ: ಸರ್ಕಾರಿ ಕಂಪನಿಗಳು ರಷ್ಯಾದಿಂದ ಖರೀದಿಸಿರುವ ಕಚ್ಚಾ ತೈಲಕ್ಕೆ ಪ್ರತಿಯಾಗಿ ರೂಪಾಯಿಯಲ್ಲಿ ಪಾವತಿ ಮಾಡುವ ಆಲೋಚನೆ ಇಲ್ಲ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಸೋಮವಾರ ತಿಳಿಸಿದೆ.

ಭಾರತವು ತನ್ನ ಅಗತ್ಯದ ಕಚ್ಚಾ ತೈಲದ ಪೈಕಿ ಶೇಕಡ 1ರಷ್ಟನ್ನು ರಷ್ಯಾದಿಂದ ಖರೀದಿಸುತ್ತಿದೆ. ಆದರೆ, ಪಾಶ್ಚಿಮಾತ್ಯ ದೇಶಗಳು ಈಗ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಿರುವ ಕಾರಣದಿಂದಾಗಿ, ಅಲ್ಲಿಂದ ಖರೀದಿಸುವ ಕಚ್ಚಾ ತೈಲ ಮತ್ತು ಅನಿಲಕ್ಕೆ ರೂಪಾಯಿಯಲ್ಲಿ ಹಣ ಪಾವತಿ ಮಾಡಬಹುದು ಎಂಬ ಸಲಹೆಗಳು ಬಂದಿದ್ದವು.

‘ಈಗಿನ ಸಂದರ್ಭದಲ್ಲಿ, ಸರ್ಕಾರಿ ಕಂಪನಿಗಳು ರಷ್ಯಾದಿಂದ ಅಥವಾ ಇತರ ಯಾವುದೇ ದೇಶದಿಂದ ಖರೀದಿಸುವ ಕಚ್ಚಾ ತೈಲಕ್ಕೆ ರೂಪಾಯಿಗಳಲ್ಲಿ ಪಾವತಿ ಮಾಡುವ ಪ್ರಸ್ತಾವವು ಪರಿಗಣನೆಯಲ್ಲಿ ಇಲ್ಲ’ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ ತೆಲಿ ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

ADVERTISEMENT

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ರಿಯಾಯಿತಿ ಬೆಲೆಗೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸಿವೆ.

ರಷ್ಯಾದಿಂದ ಖರೀದಿಸಿದ ತೈಲಕ್ಕೆ ಡಾಲರ್‌ಗಳಲ್ಲಿ ಹಣ ಪಾವತಿ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ರಷ್ಯಾ ಜೊತೆಗಿನ ತೈಲ ಮತ್ತು ಇಂಧನ ವಹಿವಾಟು ನಿರ್ಬಂಧ ಆಗಿಲ್ಲ. ಅಂದರೆ, ಇಂಧನ ಹಾಗೂ ಕಚ್ಚಾ ತೈಲವನ್ನು ಯಾವುದೇ ಕಂಪನಿ ಅಥವಾ ದೇಶ ರಷ್ಯಾದಿಂದ ಮುಕ್ತವಾಗಿ ಖರೀದಿಸಬಹುದು. ಅದಕ್ಕೆ ಹಣ ಪಾವತಿಗೆ ಅಂತರರಾಷ್ಟ್ರೀಯ ಪಾವತಿ ವ್ಯವಸ್ಥೆಗಳನ್ನು ಬಳಸಿಕೊಳ್ಳಬಹುದು ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.