ADVERTISEMENT

ಜಪಾನ್‌ ಹಿಂದಿಕ್ಕಿದ ಭಾರತ; ವಿಶ್ವದಲ್ಲಿ ನಾಲ್ಕನೆಯ ಅತಿದೊಡ್ಡ ಅರ್ಥವ್ಯವಸ್ಥೆ

2030ರ ವೇಳೆಗೆ ಜರ್ಮನಿಯನ್ನು ಮೀರುವ ವಿಶ್ವಾಸ

ಪಿಟಿಐ
Published 30 ಡಿಸೆಂಬರ್ 2025, 15:26 IST
Last Updated 30 ಡಿಸೆಂಬರ್ 2025, 15:26 IST
   

ನವದೆಹಲಿ: ಭಾರತದ ಅರ್ಥ ವ್ಯವಸ್ಥೆಯು ಜಪಾನ್ ದೇಶದ ಅರ್ಥ ವ್ಯವಸ್ಥೆಯ ಗಾತ್ರವನ್ನು ಹಿಂದಿಕ್ಕಿದ್ದು, 4.18 ಟ್ರಿಲಿಯನ್‌ ಡಾಲರ್‌ (ಸರಿಸುಮಾರು ₹375 ಲಕ್ಷ ಕೋಟಿ) ಆಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈಗ ಭಾರತದ ಅರ್ಥ ವ್ಯವಸ್ಥೆಯು ವಿಶ್ವದ ನಾಲ್ಕನೆಯ ಅತಿದೊಡ್ಡ ಅರ್ಥವ್ಯವಸ್ಥೆ ಎಂದು ಅದು ಹೇಳಿದೆ. ಭಾರತದ ಅರ್ಥ ವ್ಯವಸ್ಥೆಯು ಜರ್ಮನಿಯ ಅರ್ಥವ್ಯವಸ್ಥೆಯನ್ನು ಕೂಡ 2030ರ ವೇಳೆಗೆ ಹಿಂದಿಕ್ಕಿ ವಿಶ್ವದ ಮೂರನೆಯ ಅತಿದೊಡ್ಡ ಅರ್ಥವ್ಯವಸ್ಥೆ ಆಗಲಿದೆ ಎಂದು ತಿಳಿಸಿದೆ.

ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ಪ್ರಮಾಣವು ಚೆನ್ನಾಗಿದ್ದು, ವಿಶ್ವದ ಪ್ರಮುಖ ಅರ್ಥ ವ್ಯವಸ್ಥೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆ ಕಾಣುತ್ತಿದೆ ಎಂದು ಕೇಂದ್ರವು ತಿಳಿಸಿದೆ. 2025–26ನೇ ಸಾಲಿನ ಎರಡನೆಯ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಪ್ರಮಾಣವು ಶೇ 8.2ರಷ್ಟಾಗಿದೆ. ಇದು ಆರು ತ್ರೈಮಾಸಿಕಗಳಲ್ಲಿನ ಅತಿಹೆಚ್ಚಿನ ಬೆಳವಣಿಗೆ.

ADVERTISEMENT

‘ಮುಂದಿನ ಎರಡೂವರೆಯಿಂದ ಮೂರು ವರ್ಷಗಳಲ್ಲಿ ಭಾರತದ ಜಿಡಿಪಿ ಗಾತ್ರವು 7.3 ಅಮೆರಿಕನ್ ಡಾಲರ್‌ (ಸರಿಸುಮಾರು ₹655 ಲಕ್ಷ ಕೋಟಿ) ಆಗುವ ನಿರೀಕ್ಷೆ ಇದೆ’ ಎಂದು ಕೇಂದ್ರ ಸರ್ಕಾರದ ಪ್ರಕಟಣೆಯೊಂದು ತಿಳಿಸಿದೆ. ಅಮೆರಿಕವು ವಿಶ್ವದ ಅತಿದೊಡ್ಡ ಅರ್ಥ ವ್ಯವಸ್ಥೆಯನ್ನು ಹೊಂದಿದೆ. ಚೀನಾ ಎರಡನೆಯ ಸ್ಥಾನದಲ್ಲಿದೆ.

ದೇಶದ ಮಾರುಕಟ್ಟೆಯಲ್ಲಿ ಜನಸಾಮಾನ್ಯರಿಂದ ಬೇಡಿಕೆಯು ಹೆಚ್ಚಾಗಿರುವುದು ಅರ್ಥ ವ್ಯವಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಕೇಂದ್ರವು ಪ್ರತಿಪಾದಿಸಿದೆ.

ಬೇರೆ ಬೇರೆ ಅಂತರರಾಷ್ಟ್ರೀಯ ಸಂಸ್ಥೆಗಳು ಭಾರತದ ಅರ್ಥ ವ್ಯವಸ್ಥೆಯ ಬಗ್ಗೆ ಬಹಳ ಆಶಾವಾದವನ್ನು ವ್ಯಕ್ತಪಡಿಸಿವೆ ಎಂದು ಹೇಳಿರುವ ಕೇಂದ್ರವು, ಅವು ಜಿಡಿಪಿ ಬೆಳವಣಿಗೆಯ ಬಗ್ಗೆ ಸಿದ್ಧಪಡಿಸಿರುವ ಅಂದಾಜುಗಳನ್ನು ಕೂಡ ಉಲ್ಲೇಖಿಸಿದೆ.

‘ದೇಶಕ್ಕೆ ಸ್ವಾತಂತ್ರ್ಯ ದೊರೆತು ನೂರು ವರ್ಷಗಳಾಗುವ 2047ರ ವೇಳೆಗೆ ದೇಶದ ಜನರು ಹೆಚ್ಚಿನ ಆದಾಯವನ್ನು ಪಡೆಯುವಂತೆ ಆಗಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಸಾಧಿಸಲು ದೇಶವು ಸುಧಾರಣೆಗಳನ್ನು, ಸಾಮಾಜಿಕ ಪ್ರಗತಿಯನ್ನು ನೆಚ್ಚಿಕೊಂಡಿದೆ’ ಎಂದು ಪ್ರಕಟಣೆಯು ವಿವರಿಸಿದೆ.

ಹಣದುಬ್ಬರ ಪ್ರಮಾಣವು ನಿಗದಿತ ಮಟ್ಟಕ್ಕಿಂತ ಕಡಿಮೆ ಇದೆ, ನಿರುದ್ಯೋಗ ದರವು ಕಡಿಮೆ ಆಗುತ್ತಿದೆ, ರಫ್ತ ಪ್ರಮಾಣ ಸುಧಾರಿಸುತ್ತಿದೆ ಎಂದು ಅದರಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.