ADVERTISEMENT

ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡಂಕಿ ಆರ್ಥಿಕ ಪ್ರಗತಿ: ನೀತಿ ಆಯೋಗ

ಪಿಟಿಐ
Published 11 ಜುಲೈ 2021, 15:41 IST
Last Updated 11 ಜುಲೈ 2021, 15:41 IST

ನವದೆಹಲಿ: ದೇಶದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡಂಕಿ ಪ್ರಗತಿ ಸಾಧಿಸಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಹೇಳಿದ್ದಾರೆ.

‘ಈ ಹಣಕಾಸು ವರ್ಷದ ದ್ವಿತೀಯಾರ್ಧದ ವೇಳೆಗೆ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುವ ಹಲವು ಸೂಚನೆಗಳು ಕಾಣಿಸುತ್ತಿವೆ’ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆರ್ಥಿಕ ಚೇತರಿಕೆಯು ಉತ್ತಮವಾಗಿರಲಿದ್ದು, ದೇಶದ ಜಿಡಿಪಿ ಬೆಳವಣಿಗೆ ಅಂದಾಜನ್ನು ತಗ್ಗಿಸಿರುವ ಸಂಸ್ಥೆಗಳು ಪರಿಷ್ಕರಿಸಿ ಮತ್ತೆ ಹೆಚ್ಚಿಸಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೋವಿಡ್‌ನ ಎರಡನೇ ಅಲೆಯಿಂದಾಗಿ ಆರ್ಥಿಕ ಚೇತರಿಕೆಯು ವಿಳಂಬ ಆಗಲಿದೆ ಎನ್ನುವ ಕಾರಣಕ್ಕೆ ಎಸ್‌ಆ್ಯಂಡ್‌ಪಿ ಗ್ಲೋಬಲ್‌ ರೇಟಿಂಗ್ಸ್ ಸಂಸ್ಥೆಯು ಭಾರತದ ಜಿಡಿಪಿ ಅಂದಾಜನ್ನು ಶೇ 11ರಿಂದ ಶೇ 9.5ಕ್ಕೆ ಇಳಿಕೆ ಮಾಡಿದೆ. ಫಿಚ್‌ ರೇಟಿಂಗ್ಸ್ ಸಂಸ್ಥೆಯು ಶೇ 10ಕ್ಕೆ ತಗ್ಗಿಸಿದೆ.

ADVERTISEMENT

‘ಖಾಸಗಿ ಹೂಡಿಕೆಯು ಯಾವಾಗ ಹೆಚ್ಚಾಗಲಿದೆ’ ಎನ್ನುವ ಪ್ರಶ್ನೆಗೆ ಕುಮಾರ್ ಅವರು, ‘ಉಕ್ಕು, ಸಿಮೆಂಟ್‌ ಮತ್ತು ರಿಯಲ್‌ ಎಸ್ಟೇಟ್‌ ವಲಯಗಳಲ್ಲಿ ಸಾಮರ್ಥ್ಯ ವೃದ್ಧಿಗಾಗಿ ಅಗತ್ಯವಾದ ಹೂಡಿಕೆಯು ಈಗಾಗಲೇ ಆಗುತ್ತಿದೆ.ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಖಾಸಗಿ ಹೂಡಿಕೆಯು ಪೂರ್ಣ ಪ್ರಮಾಣದ ಚೇತರಿಕೆ ಕಂಡುಕೊಳ್ಳುವ ನಿರೀಕ್ಷೆ ಮಾಡಬಹುದು’ ಎಂದಿದ್ದಾರೆ.

‘ಷೇರು ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ. ಈ ಸ್ಥಿತಿಯು ಇನ್ನಷ್ಟು ಬಲಗೊಳ್ಳಲಿದೆ. ಸಾಕಷ್ಟು ಸಂಖ್ಯೆಯಲ್ಲಿ ಐಪಿಒಗಳು ಬರಲಿದ್ದು, ಷೇರು ವಿಕ್ರಯಕ್ಕೆ ವಾತಾವರಣ ಉತ್ತಮವಾಗಿರುವಂತೆ ಕಾಣಿಸುತ್ತಿದೆ. ಷೇರು ವಿಕ್ರಯದ ಗುರಿಯನ್ನು ಸಂಪೂರ್ಣವಾಗಿ ತಲುಪುವ ವಿಶ್ವಾಸವಿದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಕಂಪನಿಗಳು ಮತ್ತು ಹಣಕಾಸು ಸಂಸ್ಥೆಗಳ ಷೇರುಗಳನ್ನು ಮಾರಾಟ ಮಾಡುವ ಮೂಲಕ ₹ 1.75 ಲಕ್ಷ ಕೋಟಿ ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.