ADVERTISEMENT

ತಕ್ಷಣದಿಂದ ಗೋಧಿ ರಫ್ತು ನಿಷೇಧ ಜಾರಿಗೆ

ದೇಶದಲ್ಲಿ ಗೋಧಿ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶ: ಡಿಜಿಎಫ್‌ಟಿ

ಪಿಟಿಐ
Published 14 ಮೇ 2022, 13:18 IST
Last Updated 14 ಮೇ 2022, 13:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಗೋಧಿ ಬೆಲೆ ಏರಿಕೆಯನ್ನು ನಿಯಂತ್ರಿಸುವ ಸಲುವಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಗೋಧಿ ರಫ್ತುಗೆ ನಿಷೇಧ ಹೇರಲಾಗಿದೆ. ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯವು (ಡಿಜಿಎಫ್‌ಟಿ) ಮೇ 13ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.

ಅಧಿಸೂಚನೆಯ ಹೊರಡಿಸಿದ ದಿನ ಅಥವಾ ಅದಕ್ಕೂ ಮುನ್ನ ಸರಕು ಮತ್ತು ಸೇವೆಗಳನ್ನು ಖರೀದಿಗೆ ಹಣ ಪಾವತಿಸುವ ಬಗ್ಗೆ ಬ್ಯಾಂಕ್‌ ಖಾತರಿ ನೀಡಿದ್ದರೆ (ಎಲ್‌ಒಸಿ) ಅಂತಹ ಸಂದರ್ಭದಲ್ಲಿ ರಫ್ತು ಮಾಡಲು ಅವಕಾಶ ಇದೆ ಎಂದು ಡಿಜಿಎಫ್‌ಟಿ ಹೇಳಿದೆ.

ತಕ್ಷಣದಿಂದಲೇ ಜಾರಿಗೆ ಬರುವಂತೆ ಗೋಧಿ ರಫ್ತು ನೀತಿಯನ್ನು ನಿಷೇಧಿಸಲಾಗಿದೆ ಎಂದು ಅದು ತಿಳಿಸಿದೆ.

ADVERTISEMENT

ಬೇರೆ ದೇಶಗಳ ಆಹಾರ ಸುರಕ್ಷತೆಗೆ ಮತ್ತು ಆಯಾ ಸರ್ಕಾರಗಳ ಮನವಿಯ ಮೇರೆಗೆ ಭಾರತ ಸರ್ಕಾರದ ಅನುಮತಿ ಪಡೆದು ರಫ್ತು ಮಾಡಬಹುದು ಎಂದು ಸ್ಪಷ್ಟಪಡಿಸಿದೆ.

ಈರುಳ್ಳಿ ಬೀಜಗಳ ರಫ್ತು ನೀತಿಯಲ್ಲಿ ಬದಲಾವಣೆ ತಂದಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಅದನ್ನು ನಿರ್ಬಂಧಿತ ವಿಭಾಗಕ್ಕೆ ಸೇರಿಸಲಾಗಿದೆ ಎಂದು ಡಿಜಿಎಫ್‌ಟಿ ತಿಳಿಸಿದೆ. ಈ ಮೊದಲು ಈರುಳ್ಳಿ ಬೀಜಗಳ ರಫ್ತು ಮೇಲೆ ನಿಷೇಧ ಹೇರಲಾಗಿತ್ತು.

ರಷ್ಯಾ–ಉಕ್ರೇನ್‌ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ಗೋಧಿ ಪೂರೈಕೆಗೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಗೋಧಿ ರಫ್ತು ನಿಷೇಧ ನಿರ್ಧಾರ ತೆಗೆದುಕೊಂಡಿದೆ.

ಗೋಧಿ ರಫ್ತು ಹೆಚ್ಚಿಸುವ ನಿಟ್ಟಿನಲ್ಲಿ ಮೊರಕ್ಕೊ, ಟ್ಯುನಿಶಿಯಾ, ಇಂಡೊನೇಷ್ಯಾ, ಥಾಯ್ಲೆಂಡ್‌, ವಿಯೆಟ್ನಾಂ, ಟರ್ಕಿ, ಅಲ್ಜೀರಿಯಾ ಮತ್ತು ಲೆಬನಾನ್‌ ದೇಶಗಳಿಗೆ ವ್ಯಾಪಾರ ನಿಯೋಗ ಕಳುಹಿಸುವುದಾಗಿ ವಾಣಿಜ್ಯ ಸಚಿವಾಲಯ ಈಚೆಗಷ್ಟೇ ಹೇಳಿದೆ.

ರಫ್ತಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಖಾಸಗಿ ವರ್ತಕರು ಕನಿಷ್ಠ ಬೆಂಬಲ ಬೆಲೆಗಿಂತಲೂ ಹೆಚ್ಚಿನ ದರಕ್ಕೆ ಗೋಧಿ ಖರೀದಿಸಿದ್ದಾರೆ. ಹೀಗಾಗಿ ಪ್ರಸಕ್ತ ಹಿಂಗಾರು ಮಾರುಕಟ್ಟೆ ಅವಧಿಯಲ್ಲಿ ಮೇ 1ರವರೆಗಿನ ಮಾಹಿತಿಯಂತೆ, ಸರ್ಕಾರವು ಗೋಧಿ ಖರೀದಿಸುವ ಪ್ರಮಾಣವು ಶೇ 44 ರಷ್ಟು ಇಳಿಕೆ ಆಗಿ 1.62 ಕೋಟಿ ಟನ್‌ಗೆ ತಲುಪಿದೆ. ಹಿಂದಿನ ಮಾರುಕಟ್ಟೆ ಅವಧಿಯಲ್ಲಿ ಸರ್ಕಾರವು 2.88 ಕೋಟಿ ಟನ್‌ ಖರೀದಿಸಿತ್ತು.

2022–23ನೇ ಮಾರುಕಟ್ಟೆ ವರ್ಷದಲ್ಲಿ ಒಟ್ಟಾರೆ 4.44 ಕೋಟಿ ಟನ್‌ ಗೋಧಿ ಸಂಗ್ರಹಿಸಲು ಸರ್ಕಾರ ಮುಂದಾಗಿದೆ. 2021–22ನೇ ಮಾರುಕಟ್ಟೆ ವರ್ಷದಲ್ಲಿ ಸಾರ್ವಕಾಲಿಕ ದಾಖಲೆಯ 4.33 ಕೋಟಿ ಟನ್‌ ಗೋಧಿ ಸಂಗ್ರಹ ಆಗಿತ್ತು. 2021–22ರ ಬೆಳೆ ವರ್ಷದಲ್ಲಿ 11.13 ಕೋಟಿ ಟನ್‌ ಉತ್ಪಾದನೆ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.