ADVERTISEMENT

ಯುಪಿಎ ಅವಧಿಗಿಂತ ಶೇ.65ರಷ್ಟು ಹೆಚ್ಚು ಎಫ್‌ಡಿಐ ಹರಿದು ಬಂದಿದೆ: ನಿರ್ಮಲಾ

ಪಿಟಿಐ
Published 29 ಮಾರ್ಚ್ 2022, 13:23 IST
Last Updated 29 ಮಾರ್ಚ್ 2022, 13:23 IST
ನಿರ್ಮಲಾ ಸೀತಾರಾಮನ್: ಪಿಟಿಐ ಚಿತ್ರ
ನಿರ್ಮಲಾ ಸೀತಾರಾಮನ್: ಪಿಟಿಐ ಚಿತ್ರ   

ನವದೆಹಲಿ: ಮೋದಿ ಸರ್ಕಾರದ ಅವಧಿಯಲ್ಲಿ ದೇಶಕ್ಕೆ 550.5 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆ ಹರಿದು ಬಂದಿದ್ದು, ಇದು 10 ವರ್ಷಗಳ ಯುಪಿಎ ಸರ್ಕಾರದ ಅಧಿಕಾರದ ಅವಧಿಯಲ್ಲಿ ಬಂದಿದ್ದಕ್ಕಿಂತ ಶೇಕಡ 65ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ನಮ್ಮ ಸರ್ಕಾರದ ಆರ್ಥಿಕ ನಿರ್ವಹಣೆ ಬಗ್ಗೆ ಹೂಡಿಕೆದಾರರು ಹೆಚ್ಚು ವಿಶ್ವಾಸ ಇಟ್ಟಿದ್ದಾರೆ ಎಂದು ಅವರು ಹೇಳಿದರು.

ಲೋಕಸಭೆಯಲ್ಲಿ ಹಣಕಾಸು ಮತ್ತು ವಿನಿಯೋಗ ಮಸೂದೆ, 2022ರ ಚರ್ಚೆಗೆ ಉತ್ತರಿಸಿದ ಸಚಿವರು, ಭಾರತವು ವಿಶ್ವದ ಅಗ್ರ ಐದು ವಿದೇಶಿ ನೇರ ಹೂಡಿಕೆ ಸ್ವೀಕರಿಸುವ ದೇಶಗಳಲ್ಲಿ ಸ್ಥಾನ ಪಡೆದಿದೆ ಎಂದು ಹೇಳಿದರು.

ಹಿಂದಿನ ಹಣಕಾಸು ವರ್ಷದಲ್ಲಿ 74.9 ಬಿಲಿಯನ್ ಡಾಲರ್‌ನಷ್ಟಿದ್ದ ಎಫ್‌ಡಿಐ ಒಳಹರಿವು, 2020-21ರಲ್ಲಿ 81.72 ಬಿಲಿಯನ್ ಡಾಲರ್ ಆಗಿದೆ ಎಂದರು.

ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ, ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಸರ್ಕಾರವು ತೆರಿಗೆಗಳನ್ನು ಆಶ್ರಯಿಸಿಲ್ಲ ಮತ್ತು ಆರ್ಥಿಕ ಚೇತರಿಕೆಗೆ ಹಣ ನೀಡಲು ಯಾವುದೇ ತೆರಿಗೆಯನ್ನು ಹೆಚ್ಚಿಸಲಾಗಿಲ್ಲ ಎಂದು ಅವರು ಹೇಳಿದರು.

ADVERTISEMENT

ಮತ್ತೊಂದೆಡೆ, ಒಇಸಿಡಿ(ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ) ವರದಿಯ ಪ್ರಕಾರ, 32 ದೇಶಗಳು ತಮ್ಮ ಆರ್ಥಿಕ ಚೇತರಿಕೆಗಾಗಿ ತೆರಿಗೆ ಹೆಚ್ಚಳ ಮಾಡಿವೆ ಎಂದಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಸಾಂಕ್ರಾಮಿಕ ರೋಗದಂತೆ ಎಲ್ಲಾ ದೇಶಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸೀತಾರಾಮನ್ ಒತ್ತಿ ಹೇಳಿದರು.

ಕೇಂದ್ರ ತೆರಿಗೆಯಿಂದ ರಾಜ್ಯಗಳಿಗೆ 2021-22ರ ಪರಿಷ್ಕೃತ ಅಂದಾಜು 7.45 ಲಕ್ಷ ಕೋಟಿಗಿಂತ ಹೆಚ್ಚು ಹಣ 8.35 ಲಕ್ಷ ಕೋಟಿ ರೂ.ಗಳನ್ನುಪ್ರಸಕ್ತ ಹಣಕಾಸು ವರ್ಷದಲ್ಲಿ ವಿತರಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.