ADVERTISEMENT

2020ರಲ್ಲಿ ಎಫ್‌ಡಿಐ ಒಳಹರಿವು ಶೇ 27ರಷ್ಟು ಹೆಚ್ಚಳ

ಪಿಟಿಐ
Published 21 ಜೂನ್ 2021, 14:13 IST
Last Updated 21 ಜೂನ್ 2021, 14:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್‌ಡಿಐ) ರೂಪದಲ್ಲಿ ಭಾರತವು 2019ರಲ್ಲಿ ಸ್ವೀಕರಿಸಿರುವ ಮೊತ್ತಕ್ಕೆ ಹೋಲಿಸಿದರೆ 2020ರಲ್ಲಿ ಶೇಕಡ 27ರಷ್ಟು ಏರಿಕೆ ಆಗಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

2019ರಲ್ಲಿ ಭಾರತಕ್ಕೆ ₹ 3.78 ಲಕ್ಷ ಕೋಟಿ ಎಫ್‌ಡಿಐ ಹರಿದುಬಂದಿತ್ತು. ಇದು 2020ರಲ್ಲಿ ₹ 4.74 ಲಕ್ಷ ಕೋಟಿಗೆ ಏರಿಕೆ ಆಗಿದ್ದು, ಅತಿ ಹೆಚ್ಚಿನ ಎಫ್‌ಡಿಐ ಒಳಹರಿವು ಕಂಡಿರುವ ದೇಶಗಳ ಸಾಲಿನಲ್ಲಿ ಭಾರತ ಐದನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಉದ್ಯಮದಲ್ಲಿ ಆಗಿರುವ ಸ್ವಾಧೀನ ವಹಿವಾಟುಗಳಿಂದಾಗಿ ಒಳಹರಿವು ಹೆಚ್ಚಾಗಿದೆ. ಸೋಮವಾರ ಬಿಡುಗಡೆ ಆಗಿರುವ ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನದ (ಯುಎನ್‌ಸಿಟಿಎಡಿ) 2021ರ ‘ದಿ ವರ್ಲ್ಡ್‌ ಇನ್‌ವೆಸ್ಟ್‌ಮೆಂಟ್‌ ರಿಪೋರ್ಟ್‌’ನಲ್ಲಿ ಈ ಮಾಹಿತಿ ಇದೆ.

ADVERTISEMENT

ಸಾಂಕ್ರಾಮಿಕದಿಂದಾಗಿ ಡಿಜಿಟಲ್‌ ಮೂಲಸೌಕರ್ಯ ಮತ್ತು ಸೇವೆಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಾಯಿತು. ಹೀಗಾಗಿ ಐಸಿಟಿ ಉದ್ಯಮವನ್ನು ಕೇಂದ್ರವಾಗಿ ಇರಿಸಿಕೊಂಡು ಪ್ರಮುಖ ಕಂಪನಿಗಳು ಬೇರೆ ದೇಶಗಳಲ್ಲಿ ಅಂಗಸಂಸ್ಥೆಗಳನ್ನು ಸ್ಥಾಪಿಸುವುದು ಹೆಚ್ಚಾಯಿತು.

ಕೋವಿಡ್ ಎರಡನೇ ಅಲೆಯಿಂದಾಗಿ ಭಾರತದ ಒಟ್ಟಾರೆ ಆರ್ಥಿಕ ಚಟುವಟಿಕೆಗಳ ಮೇಲೆ ಹೆಚ್ಚಿನ ಪರಿಣಾಮ ಉಂಟಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸಾಂಕ್ರಾಮಿಕವು ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ಪ್ರಮುಖ ಹೂಡಿಕೆ ತಾಣಗಳ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡಿದೆ. ಕರ್ನಾಟಕದಲ್ಲಿ ಏಪ್ರಿಲ್‌ನಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಗೆ ಬಂದಿದ್ದರಿಂದ ಉತ್ಪಾದನೆಗೆ ಅಡ್ಡಿಯಾಗಿದೆ ಮತ್ತು ಹೂಡಿಕೆಯಲ್ಲಿ ವಿಳಂಬ ಆಗಿದೆ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.