ನವದೆಹಲಿ: ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳಾದ ಇಂಡಿಯನ್ ಆಯಿಲ್ ಮತ್ತು ಭಾರತ್ ಪೆಟ್ರೋಲಿಯಂ ಪುನರಾರಂಭಿಸಿವೆ.
ಸೆಪ್ಟೆಂಬರ್ ಮತ್ತು ಅಕ್ಟೋಬರ್‌ಗೆ ಪೂರೈಕೆ ಆಗುವ ಕಚ್ಚಾ ತೈಲವನ್ನು ಈ ಕಂಪನಿಗಳು ಖರೀದಿಸಿವೆ ಎಂದು ಮೂಲಗಳು ಹೇಳಿವೆ.
ಕಚ್ಚಾ ತೈಲದ ಮೇಲಿನ ರಿಯಾಯಿತಿ ಕಡಿಮೆ ಆಗಿದ್ದರಿಂದಾಗಿ ಹಾಗೂ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಅಮೆರಿಕವು ಟೀಕಿಸಿದ ನಂತರದಲ್ಲಿ ಜುಲೈನಲ್ಲಿ ಕಂಪನಿಗಳು ಈ ಕಚ್ಚಾ ತೈಲ ಖರೀದಿಸಿರಲಿಲ್ಲ. ಈಗ ರಿಯಾಯಿತಿಯು ತುಸು ಹೆಚ್ಚಾಗಿದೆ.
ರಷ್ಯಾದ ಉರಲ್ ಕಚ್ಚಾ ತೈಲಕ್ಕೆ ಪ್ರತಿ ಬ್ಯಾರೆಲ್‌ಗೆ ಸಿಗುವ ರಿಯಾಯಿತಿಯು ಈಗ 3 ಡಾಲರ್‌ಗೆ ಹೆಚ್ಚಿದೆ. ಹೀಗಾಗಿ, ಈ ಬೆಲೆಯು ಭಾರತದ ತೈಲ ಸಂಸ್ಕರಣಾ ಕಂಪನಿಗಳಿಗೆ ಆಕರ್ಷಕವಾಗಿ ಕಾಣುತ್ತಿದೆ. ಚೀನಾ ಕೂಡ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಹೆಚ್ಚು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಉರಲ್ ಮಾತ್ರವೇ ಅಲ್ಲದೆ ಇಂಡಿಯನ್ ಆಯಿಲ್ ಕಂಪನಿಯು ರಷ್ಯಾದಿಂದ ಇತರ ಕೆಲವು ದರ್ಜೆಯ ಕಚ್ಚಾ ತೈಲವನ್ನೂ ಖರೀದಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಣಕಾಸಿನ ಲೆಕ್ಕಾಚಾರ ಆಧರಿಸಿ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಮುಂದುವರಿಸಲಾಗುತ್ತದೆ ಎಂದು ಇಂಡಿಯನ್ ಆಯಿಲ್ ಕಂಪನಿಯು ಮಾರುಕಟ್ಟೆ ವಿಶ್ಲೇಷಕರಿಗೆ ಸೋಮವಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.