ADVERTISEMENT

ಭಾರತಕ್ಕೆ ಡಿಸೆಂಬರ್‌ನಿಂದ ರಷ್ಯಾ ತೈಲದ ನೇರ ಆಮದು ಕಡಿಮೆ

ಪಿಟಿಐ
Published 5 ನವೆಂಬರ್ 2025, 15:38 IST
Last Updated 5 ನವೆಂಬರ್ 2025, 15:38 IST
ಕಚ್ಚಾ ತೈಲ ಬ್ಯಾರೆಲ್‌
ಕಚ್ಚಾ ತೈಲ ಬ್ಯಾರೆಲ್‌   

ನವದೆಹಲಿ: ಭಾರತದ ಕಂಪನಿಗಳು ರಷ್ಯಾದಿಂದ ಕಚ್ಚಾ ತೈಲವನ್ನು ನೇರವಾಗಿ ಆಮದು ಮಾಡಿಕೊಳ್ಳುವುದನ್ನು ನವೆಂಬರ್‌ ಕೊನೆಯ ವಾರದಿಂದ ಕಡಿಮೆ ಮಾಡಲಿವೆ.

ರಷ್ಯಾದ ರೊಸ್ನೆಫ್ಟ್‌ ಹಾಗೂ ಲುಕಾಯಿಲ್ ಕಂಪನಿಗಳ ಮೇಲೆ ಅಮೆರಿಕವು ವಿಧಿಸಿರುವ ನಿರ್ಬಂಧಕ್ಕೆ ಅನುಗುಣವಾಗಿ ಭಾರತದ ತೈಲ ಸಂಸ್ಕರಣಾ ಕಂಪನಿಗಳು ನಡೆದುಕೊಳ್ಳುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಇದರಿಂದಾಗಿ ಡಿಸೆಂಬರ್‌ನಲ್ಲಿ ಭಾರತಕ್ಕೆ ಬರುವ ರಷ್ಯಾದ ಕಚ್ಚಾ ತೈಲದ ಪ್ರಮಾಣ ತೀವ್ರವಾಗಿ ತಗ್ಗಲಿದೆ. ನಂತರದಲ್ಲಿ, 2026ರ ಆರಂಭದಿಂದ ಮಧ್ಯವರ್ತಿಗಳು ಹಾಗೂ ಪರ್ಯಾಯ ವ್ಯಾಪಾರ ಮಾರ್ಗಗಳ ಮೂಲಕ ರಷ್ಯಾದ ಕಚ್ಚಾ ತೈಲದ ಆಮದು ನಿಧಾನವಾಗಿ ಹೆಚ್ಚಳವಾಗುವ ಅಂದಾಜು ಇದೆ.

ADVERTISEMENT

ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಕಂಪನಿಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ ಅಲ್ಲಿಂದ ಖರೀದಿಯನ್ನು ನಿಲ್ಲಿಸಲಿದೆ. ಸರ್ಕಾರಿ ಸ್ವಾಮ್ಯದ ಇತರ ಎರಡು ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ತೈಲ ಆಮದು ನಿಲ್ಲಿಸುವುದಾಗಿ ಹೇಳಿವೆ. ಎಂಆರ್‌ಪಿಎಲ್‌ ಹಾಗೂ ಎಚ್‌ಪಿಸಿಎಲ್‌–ಮಿತ್ತಲ್‌ ಎನರ್ಜಿ ಲಿಮಿಟೆಡ್‌ ಕಂಪನಿ ಮುಂದಿನ ದಿನಗಳಲ್ಲಿ ಆಮದನ್ನು ಅಮಾನತಿನಲ್ಲಿ ಇರಿಸುವ ಆಲೋಚನೆ ಇರುವುದಾಗಿ ಹೇಳಿವೆ.

ಆದರೆ ನಯಾರಾ ಎನರ್ಜಿ ಕಂಪನಿಯ ವಾದಿನಾರ್‌ ತೈಲ ಸಂಸ್ಕರಣಾ ಘಟಕವು ರಷ್ಯಾದಿಂದ ತೈಲ ಆಮದನ್ನು ಮುಂದುವರಿಸುವ ನಿರೀಕ್ಷೆ ಇದೆ. ನಯಾರಾ ಕಂಪನಿಯಲ್ಲಿ ರೊಸ್ನೆಫ್ಟ್‌ನ ಹೂಡಿಕೆ ಇದೆ.

ದತ್ತಾಂಶ ವಿಶ್ಲೇಷಣಾ ಸಂಸ್ಥೆ ಕೆಪ್ಲರ್‌ನ ಮುಖ್ಯ ಸಂಶೋಧನಾ ವಿಶ್ಲೇಷಕ ಸುಮಿತ್ ರಿತೋಲಿಯಾ ಅವರ ಪ್ರಕಾರ, ಅಕ್ಟೋಬರ್‌ನಲ್ಲಿ ಭಾರತಕ್ಕೆ ಕಚ್ಚಾ ತೈಲ ಪೂರೈಸಿದ ದೇಶಗಳ ಸಾಲಿನಲ್ಲಿ ರಷ್ಯಾ ಮೊದಲ ಸ್ಥಾನದಲ್ಲಿದೆ. ಇರಾಕ್ ಮತ್ತು ಸೌದಿ ಅರೇಬಿಯಾ ನಂತರದ ಸ್ಥಾನಗಳಲ್ಲಿವೆ.

ತಜ್ಞರ ಪ್ರಕಾರ ರಷ್ಯಾದಿಂದ ಕಚ್ಚಾ ತೈಲ ಆಮದು ಸಂಪೂರ್ಣವಾಗಿ ನಿಲ್ಲುವ ಸಾಧ್ಯತೆ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಆಮದು ಹೆಚ್ಚು ಸಂಕೀರ್ಣವಾದ ಸಾಗಣೆ ಮತ್ತು ಖರೀದಿ ವ್ಯವಸ್ಥೆಯನ್ನು ಆಶ್ರಯಿಸಲಿದೆ.

‘ಡಿಸೆಂಬರ್‌ನಲ್ಲಿ ರಷ್ಯಾದ ಕಚ್ಚಾ ತೈಲ ಆಮದು ಗಣನೀಯವಾಗಿ ಕಡಿಮೆ ಆಗಬಹುದು. 2026ರ ಮೊದಲಾರ್ಧದ ಮಧ್ಯಭಾಗದಲ್ಲಿ ಅಥವಾ ಕೊನೆಯ ಹಂತದಲ್ಲಿ, ಹೊಸ ಮಧ್ಯವರ್ತಿಗಳು ಹಾಗೂ ಪರ್ಯಾಯ ಮಾರ್ಗಗಳು ಸೃಷ್ಟಿಯಾದ ನಂತರ ಅಲ್ಲಿಂದ ತೈಲ ತರಿಸಿಕೊಳ್ಳುವುದು ಹಂತ ಹಂತವಾಗಿ ಹೆಚ್ಚಳವಾಗಬಹುದು’ ಎಂದು ಅವರು ಹೇಳಿದ್ದಾರೆ.