ಬೆಂಗಳೂರು: ದೇಶದ ವ್ಯಾಪಾರ ಚಟುವಟಿಕೆಯಲ್ಲಿನ ಬೆಳವಣಿಗೆ ಸೆಪ್ಟೆಂಬರ್‌ನಲ್ಲಿ 9 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ವರದಿ ಸೋಮವಾರ ಹೇಳಿದೆ.
ಸೇವಾ ವಲಯ ಮತ್ತು ತಯಾರಿಕಾ ವಲಯದ ಚಟುವಟಿಕೆಗಳನ್ನು ಸೂಚಿಸುವ ಎಚ್‌ಎಸ್‌ಬಿಸಿ ಇಂಡಿಯಾ ಕಾಂಪೊಸಿಟ್ ಪರ್ಚೇಸಿಂಗ್ ಮ್ಯಾನೇರ್ಜಸ್ ಸೂಚ್ಯಂಕವು (ಪಿಎಂಐ) ಆಗಸ್ಟ್‌ನಲ್ಲಿ 60.7ರಷ್ಟಿತ್ತು. ಇದು ಸೆಪ್ಟೆಂಬರ್ 59.3ಕ್ಕೆ ಇಳಿದಿದೆ. ಬೇಡಿಕೆ ಪ್ರಮಾಣದಲ್ಲಿ ಇಳಿಕೆ ಮತ್ತು ವೆಚ್ಚದಲ್ಲಿನ ಏರಿಕೆಯಿಂದ ಪ್ರಗತಿ ಕುಂಠಿತವಾಗಿದೆ. ಆದರೆ, ಸೇವಾ ವಲಯದಲ್ಲಿ ಉದ್ಯೋಗ ಸೃಷ್ಟಿಯು ಎರಡು ವರ್ಷದಲ್ಲಿ ತ್ವರಿತವಾಗಿ ಏರಿಕೆ ಆಗಿದೆ ಎಂದು ತಿಳಿಸಿದೆ.
ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕವು 50ರ ಮೇಲಿದ್ದರೆ ಬೆಳವಣಿಗೆಯು ಸಶಕ್ತವಾಗಿದೆ ಎಂದು ಅರ್ಥೈಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ಬೆಳವಣಿಗೆಯು ಕುಂಠಿತವಾಗಿದೆ ಎಂದರ್ಥ.
‘ಸೆಪ್ಟೆಂಬರ್‌ನಲ್ಲಿ ಪಿಎಂಐ ಸೂಚ್ಯಂಕ ಇಳಿಕೆಯಾಗಿದೆ. ಇದು 2024ರಲ್ಲಿ ದಾಖಲಾದ ಅತಿ ನಿಧಾನವಾದ ಬೆಳವಣಿಗೆಯಾಗಿದೆ’ ಎಂದು ಎಚ್‌ಎಸ್‌ಬಿಸಿಯ ಭಾರತದ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಂಜುಲ್ ಭಂಡಾರಿ ತಿಳಿಸಿದ್ದಾರೆ.
ತಯಾರಿಕೆ ಮತ್ತು ಸೇವಾ ವಲಯಗಳೆರಡೂ ಈ ತಿಂಗಳಲ್ಲಿ ಒಂದೇ ರೀತಿಯ ಪ್ರವೃತ್ತಿಯನ್ನು ದಾಖಲಿಸಿವೆ. ದೀರ್ಘಾವಧಿಯ ಸರಾಸರಿಗೆ ಹೋಲಿಸಿದರೆ ಬೆಳವಣಿಗೆ ದರ ಉತ್ತಮವಾಗಿದೆ ಎಂದು ಹೇಳಿದ್ದಾರೆ.
ಸೇವಾ ಉದ್ಯಮದ ಸೂಚ್ಯಂಕವು ಆಗಸ್ಟ್‌ನಲ್ಲಿ 60.9 ದಾಖಲಾಗಿತ್ತು. ಇದು ಸೆಪ್ಟೆಂಬರ್‌ನಲ್ಲಿ 58.9ಕ್ಕೆ ಇಳಿದಿದೆ. ತಯಾರಿಕಾ ವಲಯವು ಎಂಟು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, 56.7 ದಾಖಲಾಗಿದೆ. ಕಳೆದ ತಿಂಗಳು ಸೂಚ್ಯಂಕ 57.5 ಇತ್ತು. ಹೊಸ ವ್ಯಾಪಾರ ಮತ್ತು ಬೇಡಿಕೆ ಇಳಿಕೆಯಾಗಿದ್ದರಿಂದ ಸೂಚ್ಯಂಕವು ಇಳಿದಿದೆ.
ತಯಾರಿಕಾ ವೆಚ್ಚದಲ್ಲಿನ ಏರಿಕೆಯನ್ನು ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸಿದವು. ತಯಾರಿಕಾ ವೆಚ್ಚದ ಹಣದುಬ್ಬರ ಸೆಪ್ಟೆಂಬರ್‌ನಲ್ಲಿ ಏರಿಕೆಯಾಗಿದೆ. ಇದರಿಂದ ಎರಡೂ ವಲಯದಲ್ಲಿ ಉತ್ಪಾದನೆ ವೆಚ್ಚ ಏರಿಕೆಯಾಗಿದೆ ಎಂದು ಭಂಡಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.