ADVERTISEMENT

ತೆರಿಗೆ ವಂಚನೆ: ‘ಒಪ್ಪೊ’ಗೆ ನೋಟಿಸ್

ಪಿಟಿಐ
Published 13 ಜುಲೈ 2022, 14:21 IST
Last Updated 13 ಜುಲೈ 2022, 14:21 IST
   

ನವದೆಹಲಿ: ₹ 4,389 ಕೋಟಿ ಆಮದು ಸುಂಕ ವಂಚಿಸಿದ್ದಕ್ಕಾಗಿ ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ‘ಒಪ್ಪೊ’ದ ಭಾರತದ ಘಟಕಕ್ಕೆ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಒಪ್ಪೊ ಕಂಪನಿಗೆ ಸೇರಿದ ಸ್ಥಳಗಳಲ್ಲಿ ನಡೆದ ದಾಳಿಯ ವೇಳೆ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆಮದು ಮಾಡಿಕೊಂಡ ಕೆಲವು ವಸ್ತುಗಳ ವಿವರ ಸಲ್ಲಿಸುವಾಗ, ರಾಯಧನ ‍ಪಾವತಿಸುವಾಗ, ಬಹುರಾಷ್ಟ್ರೀಯ ಕಂಪನಿಗಳಿಗೆ ಪರವಾನಗಿ ಶುಲ್ಕ ನೀಡುವಾಗ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿರುವುದು ಗೊತ್ತಾಗಿತ್ತು. ಹೀಗಾಗಿ ಕಂಪನಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಸಚಿವಾಲಯವು ಹೇಳಿದೆ.

ಒಪ್ಪೊ ಮೊಬೈಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ಒಟ್ಟು ₹ 4,389 ಕೋಟಿ ಆಮದು ಸುಂಕ ವಂಚಿಸಿರುವುದು ತನಿಖೆಯ ವೇಳೆ ಗೊತ್ತಾಗಿದೆ ಎಂದು ಸಚಿವಾಲಯ ಹೇಳಿದೆ. ‘ನೋಟಿಸ್‌ನಲ್ಲಿ ಉಲ್ಲೇಖಿಸಿರುವ ಆರೋಪಗಳ ವಿಚಾರವಾಗಿ ನಾವು ಭಿನ್ನ ಅಭಿಪ್ರಾಯ ಹೊಂದಿದ್ದೇವೆ. ನೋಟಿಸ್‌ಅನ್ನು ಪರಿಶೀಲಿಸಲಾಗುತ್ತಿದೆ. ಅದಕ್ಕೆ ಉತ್ತರಿಸಲಾಗುತ್ತದೆ. ನಾವು ಜವಾಬ್ದಾರಿಯುತ ಕಾರ್ಪೊರೇಟ್‌ ಸಂಸ್ಥೆ’ ಎಂದು ಕಂಪನಿ ಹೇಳಿದೆ.

ADVERTISEMENT

ಆಮದು ಮಾಡಿಕೊಳ್ಳುವ ಸಂದರ್ಭದಲ್ಲಿ ಸೀಮಾ ಸುಂಕ ಅಧಿಕಾರಿಗಳಿಗೆ ತಪ್ಪು ವಿವರ ನೀಡಲಾಗಿತ್ತು ಎಂಬುದನ್ನು ಒಪ್ಪೊ ಇಂಡಿಯಾದ ಹಿರಿಯ ಅಧಿಕಾರಿಗಳು ಮತ್ತು ದೇಶಿ ಪೂರೈಕೆದಾರರು ತನಿಖೆಯ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.