ನವದೆಹಲಿ: ದಕ್ಷಿಣ ಏಷ್ಯಾ ಮಾರುಕಟ್ಟೆಯಲ್ಲಿ ಅಮೆರಿಕದ ಉತ್ಪನ್ನಗಳಿಗೆ ವಿಧಿಸುತ್ತಿರುವ ದುಬಾರಿ ತೆರಿಗೆ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಟೀಕೆ ವ್ಯಕ್ತವಾದ ಬೆನ್ನಲ್ಲೇ, ಆಮದಾಗುವ ಬಾರ್ಬನ್ ವಿಸ್ಕಿಗಳ ಮೇಲಿನ ಸುಂಕವನ್ನು ಭಾರತ ಶೇ 150ರಿಂದ ಶೇ 100ಕ್ಕೆ ಇಳಿಸಿದೆ.
ಶ್ವೇತ ಭವನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಟ್ರಂಪ್ ಅವರು ಈ ವಿಷಯ ಪ್ರಸ್ತಾಪಿಸಿ, ‘ಭಾರತದಲ್ಲಿ ಅಮೆರಿಕದ ವ್ಯವಹಾರಗಳಿಗೆ ಪೂರಕ ವಾತಾವರಣವಿಲ್ಲ. ಇದು ಹೀಗೇ ಮುಂದುವರಿದರೆ, ಅದೇ ವಾತಾವರಣವನ್ನು ಭಾರತದ ಉತ್ಪನ್ನಗಳು ಎದುರಿಸಬೇಕಾಗಬಹುದು. ಅಮೆರಿಕವೂ ಹೆಚ್ಚುವರಿ ಸುಂಕ ವಿಧಿಸುವುದು ಅನಿವಾರ್ಯವಾಗಲಿದೆ’ ಎಂದು ಎಚ್ಚರಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಮೆಕ್ಕೆಜೋಳದಿಂದ ಉತ್ಪಾದಿಸಿ, ಸುಟ್ಟ ಓಕ್ ಬ್ಯಾರಲ್‌ನಲ್ಲಿಟ್ಟು ತಯಾರಿಸುವ ಬಾರ್ಬನ್ ವಿಸ್ಕಿಗಳ ಮೇಲೆ ವಿಧಿಸಲಾಗುತ್ತಿದ್ದ ಸುಂಕವನ್ನು ಭಾರತ ತಗ್ಗಿಸಿ ಆದೇಶಿಸಿದೆ. ಇಂಥ ವಿಸ್ಕಿಗಳಿಗೆ ಮೂಲ ಅಬಕಾರಿ ಸುಂಕ ಶೇ 50ರಷ್ಟು ಹಾಗೂ ಹೆಚ್ಚುವರಿ ಸುಂಕ ಶೇ 50 ಸೇರಿ ಒಟ್ಟು ಶೇ 100ರಷ್ಟು ತೆರಿಗೆ ವಿಧಿಸಲಾಗುವುದು ಎಂದಿದೆ.
ಇದರಿಂದ ಜಿಮ್‌ಬಿಮ್‌ನಂಥ ಬಾರ್ಬನ್ ವಿಸ್ಕಿಗಳ ಬೆಲೆ ತಗ್ಗಲಿದೆ ಎಂದೆನ್ನಲಾಗಿದೆ. ಆದರೆ ಬಾರ್ಬನ್ ಹೊರತುಪಡಿಸಿ ಇತರ ಮಾದರಿಯ ವಿಸ್ಕಿಗಳಿಗೆ ವಿಧಿಸಲಾಗುವ ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಡಿಯಾಜಿಯೊ ಹಾಗೂ ಪರ್ನಾಡ್ ರಿಕಾರ್ಡ್‌ನಂಥ ಮದ್ಯ ತಯಾರಿಕಾ ಕಂಪನಿಗಳು ಭಾರತದಲ್ಲಿ ₹3 ಲಕ್ಷ ಕೋಟಿಯಷ್ಟು ಬೃಹತ್ ಮಾರುಕಟ್ಟೆ ಹೊಂದಿವೆ. ಆದರೆ ಇವುಗಳ ಆಮದು ಮೇಲೆ ಭಾರತ ವಿಧಿಸುತ್ತಿರುವ ದುಬಾರಿ ಸುಂಕದ ಕುರಿತು ಈ ಕಂಪನಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.