ADVERTISEMENT

ವ್ಯಾಪಾರ ಒಪ್ಪಂದ: ಕೃಷಿ ವಿಚಾರದಲ್ಲಿ ಭಾರತದ ದೃಢ ನಿಲುವು

ಪಿಟಿಐ
Published 30 ಜೂನ್ 2025, 15:58 IST
Last Updated 30 ಜೂನ್ 2025, 15:58 IST
   

ನವದೆಹಲಿ: ವ್ಯಾಪಾರ ಒಪ್ಪಂದದ ವಿಚಾರವಾಗಿ ಭಾರತವು ಅಮೆರಿಕದ ಜೊತೆ ನಡೆಸುತ್ತಿರುವ ಮಾತುಕತೆಗಳು ಮಹತ್ವದ ಹಂತವನ್ನು ತಲುಪಿದ್ದು, ಕೃಷಿಗೆ ಸಂಬಂಧಿಸಿದಂತೆ ಭಾರತವು ಕಠಿಣ ನಿಲುವು ತಳೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕದ ಅಧಿಕಾರಿಗಳ ಜೊತೆ ಭಾರತದ ಅಧಿಕಾರಿಗಳ ತಂಡವು ವಾಷಿಂಗ್ಟನ್‌ನಲ್ಲಿ ಮಾತುಕತೆ ನಡೆಸುತ್ತಿದೆ. ವಾಣಿಜ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ಭಾರತ ತಂಡದ ನೇತೃತ್ವ ವಹಿಸಿದ್ದಾರೆ. ಈ ತಂಡವು ಅಮೆರಿಕದಲ್ಲಿ ಇನ್ನೂ ಕೆಲವು ದಿನ ಇರುವ ಸಾಧ್ಯತೆ ಇದೆ.

ಅಮೆರಿಕದ ಜೊತೆ ಮಧ್ಯಂತರ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ತಂಡವು ಅಲ್ಲಿಗೆ ತೆರಳಿದೆ. ಜುಲೈ 9ಕ್ಕೆ ಮೊದಲು ಒಪ್ಪಂದವನ್ನು ಸಾಧ್ಯವಾಗಿಸಲು ಎರಡೂ ದೇಶಗಳ ತಂಡಗಳು ಯತ್ನ ನಡೆಸಿವೆ. ಜುಲೈ 9ಕ್ಕೆ ಮೊದಲು ಒಪ್ಪಂದ ಸಾಧ್ಯವಾಗದೆ ಇದ್ದರೆ ಭಾರತದ ಸರಕುಗಳ ಮೇಲೆ ಶೇ 26ರಷ್ಟು ಪ್ರತಿಸುಂಕ ಜಾರಿಗೆ ಬರಲಿದೆ.

ADVERTISEMENT

ಭಾರತದ ಸರಕುಗಳ ಮೇಲೆ ಶೇ 26ರಷ್ಟು ಪ್ರತಿಸುಂಕ ವಿಧಿಸುವ ಕ್ರಮವನ್ನು ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಆಡಳಿತವು ಅಮಾನತಿನಲ್ಲಿ ಇರಿಸಿದೆಯಾದರೂ, ಶೇ 10ರಷ್ಟು ಮೂಲಸುಂಕ ವಿಧಿಸುವ ಕ್ರಮವು ಜಾರಿಯಲ್ಲಿ ಇದೆ. ಶೇ 26ರಷ್ಟು ಸುಂಕದಿಂದ ಪೂರ್ಣ ಪ್ರಮಾಣದ ವಿನಾಯಿತಿ ಬೇಕು ಎಂದು ಭಾರತವು ಬೇಡಿಕೆ ಇರಿಸಿದೆ.

ಕೃಷಿ ಮತ್ತು ಹಾಲಿನ ಉತ್ಪನ್ನಗಳ ಮೇಲೆ ಸುಂಕ ವಿನಾಯಿತಿ ಬೇಕು ಎಂಬುದು ಅಮೆರಿಕದ ಆಗ್ರಹ. ಆದರೆ ಭಾರತದ ರೈತರು ಸಣ್ಣ ಹಿಡುವಳಿದಾರರಾಗಿರುವ ಕಾರಣ, ಅಮೆರಿಕದ ಆಗ್ರಹಕ್ಕೆ ಒಪ್ಪಿಗೆ ನೀಡುವುದು ಕಷ್ಟ ಎಂಬುದು ಭಾರತದ ಪ್ರತಿಪಾದನೆ. 

ಭಾರತವು ಬೇರೆ ಬೇರೆ ದೇಶಗಳ ಜೊತೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದಗಳಲ್ಲಿ ಹಾಲಿನ ಉತ್ಪನ್ನಗಳ ವಲಯವನ್ನು ಮುಕ್ತವಾಗಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.