ADVERTISEMENT

ತಲೆಗೆ ಬಂದೂಕು ಇಟ್ಟ ಮಾತ್ರಕ್ಕೆ ಭಾರತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದು: ಗೋಯಲ್

ಪಿಟಿಐ
Published 24 ಅಕ್ಟೋಬರ್ 2025, 9:57 IST
Last Updated 24 ಅಕ್ಟೋಬರ್ 2025, 9:57 IST
ಪೀಯೂಷ್‌ ಗೋಯಲ್
ಪೀಯೂಷ್‌ ಗೋಯಲ್   

ಬರ್ಲಿನ್: ‘ತಲೆಗೆ ಬಂದೂಕು ಇಟ್ಟೋ ಅಥವಾ ಅವಸರದಲ್ಲೋ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಹೇಳಿದ್ದಾರೆ.

ವ್ಯಾಪಾರ ಒಪ್ಪಂದ ಸಂಬಂಧ ಬರ್ಲಿನ್‌ನಲ್ಲಿರುವ ಅವರು ಈ ವಿಷಯ ತಿಳಿಸಿದ್ದಾರೆ.

‘ಐರೋಪ್ಯ ಒಕ್ಕೂಟ ಮತ್ತು ಅಮೆರಿಕವನ್ನೂ ಒಳಗೊಂಡಂತೆ ವಿವಿಧ ರಾಷ್ಟ್ರಗಳು ಮತ್ತು ಪ್ರಾಂತ್ಯಗಳೊಂದಿಗೆ ಭಾರತವು ಸಕ್ರಿಯವಾಗಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದೆ. ಆದರೆ ಅವಸರದಲ್ಲಿ ಯಾವುದೇ ಒಪ್ಪಂದ ಮಾಡಿಕೊಳ್ಳುತ್ತಿಲ್ಲ. ಕಾಲಮಿತಿ ಅಥವಾ ನಮ್ಮ ತಲೆಗೆ ಬಂದೂಕು ಇಟ್ಟ ಮಾತ್ರಕ್ಕೆ ನಾವು ಒಪ್ಪಂದ ಮಾಡಿಕೊಳ್ಳುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ವ್ಯಾಪಾರ ಒಪ್ಪಂದವನ್ನು ದೂರಗಾಮಿ ವಿಚಾರಧಾರೆಗಳೊಂದಿಗೆ ಯಾವಾಗಲೂ ಅವಲೋಕಿಸಬೇಕು. ವ್ಯಾಪಾರ ಎನ್ನುವುದು ಒತ್ತಡ ಮತ್ತು ಅವಸರದಲ್ಲಿ ಮಾಡುವಂತದ್ದಲ್ಲ. ಹಾಗೆಯೇ ಭಾರತವು ಅಧಿಕ ಬೆಲೆ ಸಿಗುವ ಹೊಸ ಮಾರುಕಟ್ಟೆಯತ್ತ ತನ್ನ ಗಮನವನ್ನು ಕೇಂದ್ರೀಕರಿಸಿದೆ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

‘ರಾಷ್ಟ್ರದ ಹಿತವನ್ನು ಹೊರತುಪಡಿಸಿ ಬೇರಾವುದೇ ದೃಷ್ಟಿಕೋನದಿಂದ ಭಾರತವು ತನ್ನ ಮಿತ್ರ ರಾಷ್ಟ್ರವನ್ನು ಎಂದಿಗೂ ನಿರ್ಧರಿಸುವುದಿಲ್ಲ’ ಎಂದೂ ಗೋಯಲ್ ಹೇಳಿದ್ದಾರೆ.

ರಷ್ಯಾದಿಂದ ಕಚ್ಚಾ ತೈಲ ಖರೀದಿ ಸ್ಥಗಿತಗೊಳಿಸುವಂತೆ ಅಮೆರಿಕವು ನಿರಂತರವಾಗಿ ಒತ್ತಡ ಹೇರುತ್ತಿರುವ ಸಂದರ್ಭದಲ್ಲೇ ಪಿಯೂಷ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.