ADVERTISEMENT

ವ್ಯಾಪಾರ ಕೊರತೆ ₹2.26 ಲಕ್ಷ ಕೋಟಿ; ಕೇಂದ್ರ ವಾಣಿಜ್ಯ ಸಚಿವಾಲಯ

ಪಿಟಿಐ
Published 15 ಜನವರಿ 2026, 15:43 IST
Last Updated 15 ಜನವರಿ 2026, 15:43 IST
.
.   

ನವದೆಹಲಿ: ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ 2025ರ ಡಿಸೆಂಬರ್ ತಿಂಗಳಿನಲ್ಲಿ ದೇಶದ ರಫ್ತು ಪ್ರಮಾಣ ಶೇ 1.87ರಷ್ಟು ಹೆಚ್ಚಳವಾಗಿದ್ದು, ₹3.47 ಲಕ್ಷ ಕೋಟಿ ಮೌಲ್ಯದ ಸರಕುಗಳು ರಫ್ತಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ. 

ಇದೇ ಅವಧಿಯಲ್ಲಿ ಆಮದು ಪ್ರಮಾಣವು ಶೇ 8.7ರಷ್ಟು ಏರಿಕೆಯಾಗಿದ್ದು, ₹5.73 ಲಕ್ಷ ಕೋಟಿ ಆಗಿದೆ. ವ್ಯಾಪಾರ ಕೊರತೆಯು ₹2.26 ಲಕ್ಷ ಕೋಟಿಯಷ್ಟಾಗಿದೆ ಎಂದು ತಿಳಿಸಿದೆ.

ರಫ್ತು ಮೌಲ್ಯಕ್ಕಿಂತ ಆಮದು ಮೌಲ್ಯ ಹೆಚ್ಚಿದ್ದರೆ ಅದನ್ನು ವ್ಯಾಪಾರ ಕೊರತೆ ಎಂದು ಕರೆಯಲಾಗುತ್ತದೆ.

ADVERTISEMENT

ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ದೇಶದ ಸರಕುಗಳ ರಫ್ತು ಶೇ 2.44ರಷ್ಟು ಹೆಚ್ಚಳವಾಗಿ, ₹29.84 ಲಕ್ಷ ಕೋಟಿಗೆ ತಲುಪಿದೆ. ಇದೇ ಅವಧಿಯಲ್ಲಿ ದೇಶದ ಆಮದು ಶೇ 5.9ರಷ್ಟು ಏರಿಕೆಯಾಗಿ, ₹52.27 ಲಕ್ಷ ಕೋಟಿಯಷ್ಟಾಗಿದೆ. ವ್ಯಾಪಾರ ಕೊರತೆಯು ₹22.43 ಲಕ್ಷ ಕೋಟಿಯಷ್ಟಾಗಿದೆ.

‘ಜಾಗತಿಕ ಅನಿಶ್ಚಿತತೆಯ ನಡುವೆಯೂ ದೇಶದ ರಫ್ತು ಸಕಾರಾತ್ಮಕವಾಗಿ ಬೆಳವಣಿಗೆ ದಾಖಲಿಸಿದೆ. ಇದೇ ರೀತಿ ಪ್ರಗತಿ ಮುಂದುವರಿದರೆ ‍ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಸರಕು ಮತ್ತು ಸೇವೆಗಳ ಒಟ್ಟು ರಫ್ತು ಹಣಕಾಸಿನ ಮೌಲ್ಯದಲ್ಲಿ ₹76.75 ಲಕ್ಷ ಕೋಟಿ (850 ಬಿಲಿಯನ್ ಡಾಲರ್) ಆಗುವ ನಿರೀಕ್ಷೆ ಇದೆ’ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಅಗರವಾಲ್ ಹೇಳಿದ್ದಾರೆ.

ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್‌, ಸಾಗರೋತ್ಪನ್ನಗಳು ಮತ್ತು ಔಷಧಗಳು ಸೇರಿದಂತೆ ವಿವಿಧ ಸರಕುಗಳ ಸಾಗಣೆಯಿಂದ ದೇಶದ ರಫ್ತು ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

ಅಮೆರಿಕ, ಚೀನಾ ಮತ್ತು ಯುಎಇಗೆ ದೇಶದ ರಫ್ತು ಸ್ಥಿರವಾಗಿ ಬೆಳವಣಿಗೆ ಆಗುತ್ತಿದೆ ಎಂದು ತಿಳಿಸಿದ್ದಾರೆ.

ಭಾರತ–ಅಮೆರಿಕ ಒಪ್ಪಂದ ಶೀಘ್ರ 

ಭಾರತ ಮತ್ತು ಅಮೆರಿಕವು ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ತುಂಬಾ ಹತ್ತಿರದಲ್ಲಿವೆ. ಬಾಕಿ ಇರುವ ಎಲ್ಲ ವಿಷಯಗಳ ಕುರಿತು ಎರಡೂ ಕಡೆ ಮಾತುಕತೆ ನಡೆಯುತ್ತಿದೆ ಎಂದು ರಾಜೇಶ್ ಅಗರವಾಲ್ ಹೇಳಿದ್ದಾರೆ. ಅತಿ ಶೀಘ್ರದಲ್ಲಿ ಒಪ್ಪಂದ ಆಗಲಿದೆ. ಆದರೆ, ಒಪ್ಪಂದ ಯಾವಾಗ ಆಗುತ್ತದೆ ಎಂದು ಗಡುವು ನಿಗದಿ ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ. 

27ರಂದು ಭಾರತ–ಐರೋಪ್ಯ ಒಕ್ಕೂಟ ಶೃಂಗಸಭೆ 

ಐರೋಪ್ಯ ಸಮಿತಿಯ ಅಧ್ಯಕ್ಷ ಆಂಟೋನಿಯೊ ಲೂಯಿಸ್ ಸ್ಯಾಂಟೋಸ್ ಡ ಕೋಸ್ಟಾ ಮತ್ತು ಐರೋಪ್ಯ ಕಮಿಷನ್‌ನ ಅಧ್ಯಕ್ಷೆ ಉರ್ಸುಲಾ ವಾನ್‌ ಡೆರ್ ಲೇಯೆನ್ ಅವರು ಜನವರಿ 25ರಿಂದ 27ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದು, 77ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜನವರಿ 27ರಂದು ನಡೆಯಲಿರುವ 16ನೇ ಭಾರತ–ಐರೋಪ್ಯ ಒಕ್ಕೂಟ ಶೃಂಗಸಭೆಯ ಸಹ-ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಈ ವೇಳೆ ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದದ ಬಾಕಿ ಉಳಿದ ವಿಷಯಗಳ ಕುರಿತು ಮಾತುಕತೆ ನಡೆಯಲಿದ್ದು, ಉತ್ತಮ ಫಲಿತಾಂಶ ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ಭಾರತ ಮತ್ತು ಕೆನಡಾ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ವ್ಯಾಪ್ತಿಯನ್ನು ಅಂತಿಮಗೊಳಿಸಲು ಸಹ ಕೆಲಸ ಮಾಡಲಾಗುತ್ತಿದೆ ಎಂದು ರಾಜೇಶ್ ಅಗರವಾಲ್  ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.