ನವದೆಹಲಿ: ದೇಶದ ವ್ಯಾಪಾರ ಕೊರತೆ ಜುಲೈ ತಿಂಗಳಿನಲ್ಲಿ ₹2.39 ಲಕ್ಷ ಕೋಟಿ ಆಗಿದೆ. ಇದು ಎಂಟು ತಿಂಗಳ ಗರಿಷ್ಠ ಮಟ್ಟವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಆದರೆ ಇದೇ ಅವಧಿಯಲ್ಲಿ ದೇಶದ ರಫ್ತು ಪ್ರಮಾಣವು ಶೇ 7.29ರಷ್ಟು ಹೆಚ್ಚಳವಾಗಿದ್ದು, ₹3.26 ಲಕ್ಷ ಕೋಟಿಯಾಗಿದೆ. ಆಮದು ಶೇ 8.6ರಷ್ಟು ಏರಿಕೆಯಾಗಿದ್ದು, ₹5.65 ಲಕ್ಷ ಕೋಟಿಯಾಗಿದೆ. ಕಳೆದ ವರ್ಷದ ನವೆಂಬರ್ ನಂತರದ ಅತಿಹೆಚ್ಚಿನ ವ್ಯಾಪಾರ ಕೊರತೆ ಜುಲೈನಲ್ಲಿ ದಾಖಲಾಗಿದೆ.
ಏಪ್ರಿಲ್–ಜುಲೈ ಅವಧಿಯಲ್ಲಿ ರಫ್ತು ಶೇ 3ರಷ್ಟು ಏರಿಕೆಯಾಗಿದ್ದು, ₹13 ಲಕ್ಷ ಕೋಟಿಯಾಗಿದೆ. ಆಮದು ಶೇ 5ರಷ್ಟು ಹೆಚ್ಚಳವಾಗಿದ್ದು, ₹21.37 ಲಕ್ಷ ಕೋಟಿಯಷ್ಟಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಿನಲ್ಲಿ ವ್ಯಾಪಾರ ಕೊರತೆ ₹8.30 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.
ರಫ್ತು ಮೌಲ್ಯಕ್ಕಿಂತ ಆಮದು ಮೌಲ್ಯ ಹೆಚ್ಚಿದ್ದರೆ ಅದನ್ನು ವ್ಯಾಪಾರ ಕೊರತೆ ಎಂದು ಕರೆಯಲಾಗುತ್ತದೆ.
‘ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ದೇಶದ ಸರಕು ಮತ್ತು ಸೇವೆಗಳ ರಫ್ತು ಉತ್ತಮವಾಗಿದೆ. ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್, ಹರಳು ಮತ್ತು ಆಭರಣಗಳು, ಔಷಧಗಳು ಮತ್ತು ರಾಸಾಯನಿಕ ವಲಯದ ಉತ್ಪನ್ನಗಳು ಹೆಚ್ಚಾಗಿ ರಫ್ತಾಗಿದ್ದು, ಬೆಳವಣಿಗೆಗೆ ಕಾರಣವಾಗಿದೆ’ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ಸುನಿಲ್ ಬರ್ತ್ವಾಲ್ ಹೇಳಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದ ಇಳಿಕೆಯಿಂದ ಪೆಟ್ರೋಲಿಯಂ ರಫ್ತು ಶೇ 25ರಷ್ಟು ಇಳಿಕೆಯಾಗಿದ್ದು, ₹38,030 ಕೋಟಿಯಾಗಿದೆ.
ಇದೇ ವೇಳೆ ಕಚ್ಚಾ ತೈಲ ಆಮದು ಶೇ 7ರಷ್ಟು ಹೆಚ್ಚಳವಾಗಿದ್ದು, ₹1.36 ಲಕ್ಷ ಕೋಟಿಯಾಗಿದೆ. ₹34,428 ಕೋಟಿ ಮೌಲ್ಯದ ಚಿನ್ನ ಆಮದಾಗಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಆಮದು ಶೇ 13ರಷ್ಟು ಏರಿಕೆಯಾಗಿದೆ.
ಸೇವೆಗಳ ರಫ್ತಿನ ಅಂದಾಜು ಮೌಲ್ಯ ₹2.71 ಲಕ್ಷ ಕೋಟಿಯಾಗಿದೆ. ಆಮದು ₹1.34 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.