
ನವದೆಹಲಿ: ‘2025ರ ಕ್ಯಾಲೆಂಡರ್ ವರ್ಷದಲ್ಲಿ ದೇಶದಿಂದ ಒಟ್ಟು 63,25,111 ವಾಹನಗಳು ರಫ್ತಾಗಿವೆ’ ಎಂದು ಭಾರತೀಯ ಆಟೊಮೊಬೈಲ್ ತಯಾರಕರ ಸಂಘ (ಎಸ್‌ಐಎಎಂ) ಭಾನುವಾರ ತಿಳಿಸಿದೆ.
2024ರಲ್ಲಿ 50,98,474 ವಾಹನಗಳು ರಫ್ತಾಗಿದ್ದವು. ಇದಕ್ಕೆ ಹೋಲಿಸಿದರೆ ಕಳೆದ ವರ್ಷದಲ್ಲಿ ರಫ್ತು ಪ್ರಮಾಣ ಶೇ 24.1ರಷ್ಟು ಹೆಚ್ಚಳವಾಗಿದೆ. ಕಾರುಗಳು, ದ್ವಿಚಕ್ರ ವಾಹನ ಮತ್ತು ವಾಣಿಜ್ಯ ಬಳಕೆ ವಾಹನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆಯು ರಫ್ತು ಹೆಚ್ಚಳಕ್ಕೆ ಕಾರಣ ಎಂದು ಅದು ತಿಳಿಸಿದೆ.
ಪಶ್ಚಿಮ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಭಾರತದ ವಾಹನಗಳಿಗೆ ಬೇಡಿಕೆ ಸ್ಥಿರವಾಗಿದೆ ಎಂದು ಸಂಘವು ಹೇಳಿದೆ.
2024ರಲ್ಲಿ ಮಾರುತಿ ಸುಜುಕಿ ಕಂಪನಿಯ 3.26 ಲಕ್ಷ ವಾಹನಗಳು ರಫ್ತಾಗಿದ್ದವು. ಅದು ಈ ಬಾರಿ 3.95 ಲಕ್ಷಕ್ಕೆ ಹೆಚ್ಚಳವಾಗಿದೆ. 2025–26ರ ಆರ್ಥಿಕ ವರ್ಷದಲ್ಲಿ 4 ಲಕ್ಷ ವಾಹನಗಳನ್ನು ರಫ್ತು ಮಾಡುವ ಗುರಿ ಸಾಧಿಸುವ ಹಾದಿಯಲ್ಲಿ ಇರುವುದಾಗಿ ಕಂಪನಿ ತಿಳಿಸಿದೆ.
‘ದೇಶದ ಎಲ್ಲ ಪ್ರಯಾಣಿಕ ವಾಹನಗಳ ರಫ್ತಿನಲ್ಲಿ ಮಾರುತಿ ಸುಜುಕಿ ಇಂಡಿಯಾ ಪಾಲು ಶೇ 46ರಷ್ಟಿದೆ. ಜಾಗತಿಕ ಮಾರುಕಟ್ಟೆಯಲ್ಲಿ ನಾವು ದೊಡ್ಡ ಪಾಲನ್ನು ಹೊಂದಲಿದ್ದೇವೆ’ ಎಂದು ಕಂಪನಿಯ ಕಾರ್ಪೊರೇಟ್ ವ್ಯವಹಾರಗಳ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಭಾರ್ತಿ ಹೇಳಿದ್ದಾರೆ.
ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ 27ರಷ್ಟು ಏರಿಕೆಯಾಗಿದ್ದು, 91,759 ವಾಹನಗಳು ಮಾರಾಟವಾಗಿವೆ.