
ನವದೆಹಲಿ: ಒಟ್ಟು ಹನ್ನೊಂದು ದೇಶಿ ವಿಮಾನಯಾನ ಕಂಪನಿಗಳು 2025–25ರಲ್ಲಿ ಒಟ್ಟು ₹5,289 ಕೋಟಿ ನಷ್ಟ ವರದಿ ಮಾಡಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಲೋಕಸಭೆಗೆ ತಿಳಿಸಿದೆ. ಈ ಹನ್ನೊಂದು ಕಂಪನಿಗಳಲ್ಲಿ ಸರಕು ಸಾಗಣೆ ಕ್ಷೇತ್ರದ ಕಂಪನಿಯೂ ಇದೆ.
2022–23ರಲ್ಲಿ ವರದಿಯಾಗಿದ್ದ ನಷ್ಟದ ಒಟ್ಟು ಮೊತ್ತವು ₹18,606 ಕೋಟಿ. ಇದಕ್ಕೆ ಹೋಲಿಸಿದರೆ 2024–25ರಲ್ಲಿ ನಷ್ಟವು ಕಡಿಮೆ ಆಗಿದೆ. ಆದರೆ 2023–24ರಲ್ಲಿ ವರದಿಯಾಗಿದ್ದ ₹924 ಕೋಟಿ ನಷ್ಟಕ್ಕೆ ಹೋಲಿಸಿದರೆ ಹೆಚ್ಚು.
ಸಚಿವ ಮುರಳೀಧರ ಮಹೋಲ್ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ವಿವರ ನೀಡಿದ್ದಾರೆ. ದೇಶದ 11 ವಿಮಾನಯಾನ ಕಂಪನಿಗಳ ಪೈಕಿ ಇಂಡಿಗೊ, ಸ್ಟಾರ್ ಏರ್, ಇಂಡಿಯಾಒನ್ ಏರ್ ಮತ್ತು ಬ್ಲ್ಯೂಡಾರ್ಟ್ 2024–25ರಲ್ಲಿ ಲಾಭ ದಾಖಲಿಸಿವೆ. ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಅಲಯನ್ಸ್ ಏರ್, ಆಕಾಸಾ ಏರ್, ಫ್ಲೈ91, ಕ್ವಿಕ್‌ಜೆಟ್ ಕಾರ್ಗೊ, ಸ್ಪೈಸ್‌ಜೆಟ್ ನಷ್ಟ ವರದಿ ಮಾಡಿವೆ.
ವಿಮಾನಯಾನ ಕಂಪನಿಗಳ ಪೈಕಿ ಇಂಡಿಗೊ ಅತಿಹೆಚ್ಚು ಲಾಭ (₹7,253 ಕೋಟಿ) ವರದಿ ಮಾಡಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅತಿಹೆಚ್ಚು ನಷ್ಟ (₹5,832 ಕೋಟಿ) ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.