ADVERTISEMENT

ಕಂಪನಿಗಳಲ್ಲಿ ನಡೆದ ವಂಚನೆ: ನಂಬಿದವರೇ ವಂಚಿಸಿದರು ಎಂದ ಬಿ.ಆರ್‌. ಶೆಟ್ಟಿ

ಖಚಿತಪಡಿಸಿದ ಉದ್ಯಮಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 19:45 IST
Last Updated 29 ಏಪ್ರಿಲ್ 2020, 19:45 IST
ಬಿ.ಆರ್. ಶೆಟ್ಟಿ
ಬಿ.ಆರ್. ಶೆಟ್ಟಿ   

ಮಂಗಳೂರು: ‘ನಾನು ನಂಬಿದ ವ್ಯಕ್ತಿಗಳೇ ನನ್ನ ಹೆಸರಿನಲ್ಲಿ ವಂಚನೆ ನಡೆಸಿದ್ದಾರೆ. ನಮ್ಮ ಕಂಪನಿಯ ಹಿಂದಿನ ಮತ್ತು ಈಗಿನ ಕೆಲವು ಸಿಬ್ಬಂದಿ ಈ ವಂಚನೆಯ ಹಿಂದೆ ಇದ್ದಾರೆ’ ಎಂದು ಉದ್ಯಮಿ ಬಿ.ಆರ್‌. ಶೆಟ್ಟಿ ಹೇಳಿದ್ದಾರೆ.

ಎನ್‌ಎಂಸಿ ಹೆಲ್ತ್‌, ಫಿನಾಬಿಎಲ್‌ಆರ್‌ ಪಿಎಲ್‌ಸಿ ಸೇರಿದಂತೆ ಬಿ.ಆರ್‌.ಶೆಟ್ಟಿ ಒಡೆತನದ ಕಂಪನಿಗಳಿಂದ ಬೃಹತ್‌ ‍ಪ್ರಮಾಣದ ವಂಚನೆ ನಡೆದಿರುವ ಆರೋಪದ ಮೇಲೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಮತ್ತು ಬ್ರಿಟನ್‌ನಲ್ಲಿ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ. ಬಿ.ಆರ್‌.ಶೆಟ್ಟಿ ಸೇರಿದಂತೆ ಹಲವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ಸುದೀರ್ಘ ಸಮಯದ ಬಳಿಕ ಈ ಕುರಿತು ಮೌನ ಮುರಿದಿರುವ ಬಿ.ಆರ್‌.ಶೆಟ್ಟಿ, ಬುಧವಾರ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ‘ನನ್ನ ಹೆಸರನ್ನು ಪ್ರಕರಣದಿಂದ ಹೊರತರಲು ಅವಿರತವಾಗಿ ಶ್ರಮಿಸುತ್ತೇನೆ. ಸಂಬಂಧಿಸಿದ ಎಲ್ಲ ತನಿಖಾ ಪ್ರಾಧಿಕಾರಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಕಂಪನಿಗಳಿಂದ ಹೊರಹೋಗಿರುವ ಹಣವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಿ, ವಾರಸುದಾರರಿಗೆ ತಲುಪಿಸಲು ಸಹಕರಿಸುತ್ತೇನೆ’ ಎಂದಿದ್ದಾರೆ.

ADVERTISEMENT

‘ಎನ್‌ಎಂಸಿ ಹೆಲ್ತ್‌ ಪಬ್ಲಿಕ್‌ ಲಿಮಿಟೆಡ್‌ ಕಂಪನಿಯ ದೈನಂದಿನ ವಹಿವಾಟುಗಳ ನಿರ್ವಹಣೆಯಿಂದ 2017ರಿಂದಲೇ ನಾನು ದೂರ ಉಳಿದಿದ್ದೆ. ಅಂದಿನಿಂದ ನಾನು ಕಂಪನಿಯ ಜಂಟಿ ಕಾರ್ಯನಿರ್ವಾಹಕೇತರ ಅಧ್ಯಕ್ಷ ಮತ್ತು ಒಬ್ಬ ಷೇರುದಾರ ಮಾತ್ರ ಆಗಿದ್ದೆ. 2020ರ ಫೆಬ್ರುವರಿ 16ರಂದು ಆಡಳಿತ ಮಂಡಳಿಯಿಂದಲೂ ಹೊರಬಂದಿದ್ದೆ. 2019ರ ನಂತರ ನಡೆದಿರುವ ಸರಣಿ ಘಟನಾವಳಿಗಳು, ಕಂಪನಿಗಳಲ್ಲಿ ನಡೆದಿರುವ ಹಗರಣ, ದುರ್ನಡತೆ, ಅಘೋಷಿತ ಸಾಲದ ಪ್ರಮಾಣ ಎಲ್ಲರಿಗಿಂತಲೂ ನನಗೆ ಹೆಚ್ಚು ಆಘಾತ ಉಂಟುಮಾಡಿವೆ’ ಎಂದು ಶೆಟ್ಟಿ ಹೇಳಿದ್ದಾರೆ.

’ಎನ್‌ಎಂಸಿ, ಫಿನಾಬಿಎಲ್‌ಆರ್‌ ಮತ್ತು ತಮ್ಮ ಖಾಸಗಿ ಕಂಪನಿಗಳಲ್ಲಿ ದೊಡ್ಡ ಮೊತ್ತದ ಹಗರಣ ನಡೆದಿರುವುದು ತಮ್ಮ ಸಲಹೆಗಾರರು ಹಂಚಿಕೊಂಡಿರುವ ಮಾಹಿತಿಗಳು ಮತ್ತು ಸ್ವಯಂ ತನಿಖೆಯಿಂದ ಲಭ್ಯವಾಗಿರುವ ಮಾಹಿತಿಗಳಿಂದ ಖಚಿತವಾಗಿದೆ. ವೈಯಕ್ತಿಕವಾಗಿ ನನ್ನ ವಿರುದ್ಧವೂ ವಂಚನೆ ನಡೆದಿದೆ’ ಎಂದು ಅವರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

‘ನನ್ನ ಹೆಸರಿನಲ್ಲಿ ಬೋಗಸ್‌ ಬ್ಯಾಂಕ್‌ ಖಾತೆಗಳನ್ನು ತೆರೆದಿರುವುದು, ಅಲ್ಲಿಂದ ಹಣ ವರ್ಗಾವಣೆ ಮಾಡಿರುವುದು, ಸಾಲ ಪಡೆದಿರುವುದು, ವೈಯಕ್ತಿಕ ಭದ್ರತೆ ನೀಡಿರುವುದು, ಫೋರ್ಜರಿ ಸಹಿ ಮಾಡಿ ಚೆಕ್‌ ನೀಡಿರುವುದು, ನನ್ನ ಹೆಸರಿನಲ್ಲಿ ಕೆಲವು ಕಂಪನಿಗಳನ್ನು ಆರಂಭಿಸಿರುವುದು, ಪವರ್‌ ಆಫ್‌ ಅಟಾರ್ನಿ ಪತ್ರಗಳನ್ನು ಸಿದ್ಧಪಡಿಸಿ, ಅವುಗಳನ್ನು ದುರ್ಬಳಕೆ ಮಾಡಿಕೊಂಡಿರುವ ಕೃತ್ಯಗಳಲ್ಲಿ ನಾನು ಭಾಗಿಯಾಗಿಲ್ಲ. ಅವುಗಳನ್ನು ಅನುಮೋದಿಸಿಯೂ ಇಲ್ಲ. ಇಂತಹ ಕೃತ್ಯಗಳು ನಡೆದಿರುವ ಕುರಿತು ನನಗೆ ಯಾವ ಮಾಹಿತಿಯೂ ಇರಲಿಲ್ಲ’ ಎಂದು ಬಿ.ಆರ್‌.ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

‘ಕುಟುಂಬ ಗಂಡಾಂತರಕ್ಕೆ ಸಿಲುಕಿದೆ’
‘45 ವರ್ಷಗಳ ಕಾಲ ನಮ್ಮ ಕುಟುಂಬ ಪರಿಶ್ರಮ, ದೃಢನಿಶ್ಚಯ, ಸಭ್ಯತೆ, ಪ್ರಾಮಾಣಿಕತೆ ಮತ್ತು ನಂಬಿಕೆಯ ಆಧಾರದ ಮೇಲೆ ಉದ್ಯಮವನ್ನು ಮುನ್ನಡೆಸಿತ್ತು. ಆ ಶ್ರೇಷ್ಠ ರಾಷ್ಟ್ರ ನಮಗೆ ಎಲ್ಲ ಸಹಕಾರ ನೀಡಿತ್ತು. ಈಗ ನಂಬಿದವರೇ ವಂಚಿಸಿರುವುದರಿಂದ ನಮ್ಮ ಕುಟುಂಬ ಆರ್ಥಿಕವಾಗಿ ಗಂಡಾಂತರಕ್ಕೆ ಸಿಲುಕಿದೆ’ ಎಂದು ಬೇಸರ ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.